ಕೂಗು ನಿಮ್ಮದು ಧ್ವನಿ ನಮ್ಮದು

ಲಾಡ್ಜ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಯುವಕರಿಬ್ಬರು ಆತ್ಮಹತ್ಯೆ

ಶಿವಮೊಗ್ಗ: ಲಾಡ್ಜ್ ನ ಕೊಠಡಿಯಲ್ಲಿ ಇಬ್ಬರು ಯುವಕರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ನಗರದಲ್ಲಿ ನಡೆದಿದೆ. ಬಾಗಲಕೋಟೆ ಮೂಲಕ ಯುವಕರಿಬ್ಬರು ಬೆಂಗಳೂರಿನಿಂದ ಸಾಗರಕ್ಕೆ ಆಗಮಿಸಿದ್ದಾರೆ. ಸಾಗರದ ಲಾಡ್ಜ್ ಒಂದರಲ್ಲಿ ರೂಮ್ ಮಾಡಿಕೊಂಡು ತಂಗಿದ್ದ ಯುವಕರು ಅದೇ ಕೊಠಡಿಯ ಫ್ಯಾನ್ ಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮೊದಲು ತಾವಿದ್ದ ಹೋಟೆಲ್ ನ ಕೊಠಡಿಯಲ್ಲೇ ಪಿತೃಪಕ್ಷದ ಹಿರಿಯರ ಪೂಜೆ ನಡೆಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏನಿದು ಪ್ರಕರಣ ಎಂಬ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಬಾಗಲಕೋಟೆ ಜಿಲ್ಲೆ ಬನಹಟ್ಟಿ ಪಟ್ಟಣದ ಸಂತೋಷ್ (23) ಹಾಗೂ ಹನುಮಂತ (28) ಎಂಬುವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರಿಬ್ಬರೂ ಬನಹಟ್ಟಿ ಜಾತ್ರೆಗೆ ಬರುವುದಾಗಿ ತಮ್ಮ ಪಾಲಕರಿಗೆ ಕರೆ ಮಾಡಿ ತಿಳಿಸಿದ್ದರು. ಆದರೆ ಇವರು ಬನಹಟ್ಟಿಗೆ ತೆರಳುವ ಬದಲು ಸಾಗರಕ್ಕೆ ಆಗಮಿಸಿದ್ದರು. ಸಾಗರಕ್ಕೆ ಆಗಮಿಸಿದ ಇಬ್ಬರೂ ಸಪ್ಟಂಬರ್ 24 ರಂದು ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿ ಉಳಿದುಕೊಂಡಿದ್ದರು. 25 ರಂದು ಮಧ್ಯಾಹ್ನ ಹೊರಗಡೆಯಿಂದ ಊಟ ತಂದು ಲಾಡ್ಜ್ ನಲ್ಲಿಯೇ ಊಟ ಮಾಡಿದ್ದರು. ಇದಾದ ಬಳಿಕ ಇಬ್ಬರು ಯುವಕರು ಹೋಟೆಲ್ ರೂಮ್ ನಿಂದಲೇ ಹೊರಬಂದಿರಲಿಲ್ಲ. 25 ರಂದು ರಾತ್ರಿ ಹೋಟೆಲ್ ನ ರೂಮ್ ಬಾಯ್ ಹೋಗಿ ಕೊಠಡಿ ಬಾಗಿಲು ಬಡಿದಿದ್ದಾನೆ. ಆದರೆ ಯುವಕರು ಬಾಗಿಲು ತೆಗೆದಿಲ್ಲ. ಮಲಗಿರಬಹುದೇನೋ ಎಂದು ಭಾವಿಸಿದ ರೂಂ ಬಾಯ್ ಹಾಗೆಯೇ ಹೋಗಿದ್ದಾನೆ. ಬೆಳಗ್ಗೆಯೂ ಕೊಠಡಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರದಿದ್ದರಿಂದ ಅನುಮಾನಗೊಂಡ ರೂಮ್ ಬಾಯ್ ಹೋಟೆಲ್ ಮ್ಯಾನೇಜರ್ ಗೆ ವಿಷಯ ಮುಟ್ಟಿಸಿದ್ದಾನೆ. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲ ಲಾಕ್ ಮುರಿದು ಒಳಹೋದಾಗ ಇಬ್ಬರು ಯುವಕರು ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೂ ಮುನ್ನ ಹೋಟೆಲ್ ಕೊಠಡಿಯಲ್ಲೇ ಹಿರಿಯರ ಪೂಜೆ ಮಾಡಿದ್ದ ಯುವಕರು
ಇಬ್ಬರು ಯುವಕರು ಹೋಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಳ್ಳುವ ಮುನ್ನ ಪಿತೃಪಕ್ಷದ ಅಂಗವಾಗಿ ಹಿರಿಯರ ಪೂಜೆ ಮಾಡಿರುವುದು ವಿಶೇಷವಾಗಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹನುಮಂತನ ಮಾವ ಆಣ್ಣಪ್ಪ ಎಂಬುವರ ಫೋಟೋವನ್ನಿಟ್ಟು ಆ ಫೋಟೋಗೆ ಇಬ್ಬರು ಯುವಕರು ಪೂಜೆ ಸಲ್ಲಿಸಿದ್ದಾರೆ. ಬಳಿಕ ಫೋಟೋದ ಎದುರು ಮದ್ಯವನ್ನೂ ಇಟ್ಟಿದ್ದಾರೆ. ಬಳಿಕ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಇಬ್ಬರು ಯುವಕರು ಹಿರಿಯರ ಪೂಜೆ ನಡೆಸಿದ್ದು ಏಕೆ ಎನ್ನುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

ಜಾತ್ರೆಯ ಅಂಗವಾಗಿ ಊರಿಗೆ ಬರುವುದಾಗಿ ಪಾಲಕರಿಗೆ ಹೇಳಿದ್ದ ಯುವಕರಿಬ್ಬರು ಸಾಗರ ನಗರಕ್ಕೆ ಆಗಮಿಸಿದ್ದು ಏಕೆ. ಸಾಗರದಲ್ಲಿಯೇ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು. ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಆತ್ಮಹತ್ಯೆಗೆ ಇನ್ಯಾವುದಾದರೂ ಕಾರಣವಿದೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

error: Content is protected !!