ಬೀದರ್: ಬೀದರ್ ನಲ್ಲಿ ಜವರಾಯ ತನ್ನ ಅಟ್ಟಹಾಸ ಮೇರೆದಿದ್ದಾನೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಕೂಲಿ ಕೆಲಸಕ್ಕೆ ಹೋಗಿ ಸಂಜೆ ಆಟೋದಲ್ಲಿ ಮನೆಗೆ ಬರುವಾಗ ಈ ದುರಂತ ಸಂಭವಿಸಿದೆ. ವೇಗವಾಗಿ ಬಂದ ಟಿಪ್ಪರ್ ಕೂಲಿ ಕಾರಮಿಕರಿದ್ದ ಅಟೋಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವಿಗಿಡಾದರೇ ಉಳಿದ ಆರು ಜನ ಮಹಿಳೆಯರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತಿಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದರ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ಬೆಮಳಖೇಡಾ ಗ್ರಾಮದ ಸರ್ಕಾರಿ ಶಾಲೆ ಹತ್ತಿರ ನಿನ್ನೆ ಟಿಪ್ಪರ್ ಮತ್ತು ಆಟೊ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೃತಪಟ್ಟ ಎಲ್ಲರೂ ಮಹಿಳೆಯರಾಗಿದ್ದು, ಇಂಥದ್ದೊಂದು ಭೀಕರ ಅಪಘಾತಕ್ಕೆ ಬೀದರ್ ಜಿಲ್ಲೆಯ ಜನ ಮಮ್ಮಲ ಮರುಗಿದ್ದಾರೆ.
ಇನ್ನು ಚಿಟಗುಪ್ಪ ತಾಲ್ಲೂಕಿನ ಉಡುಬನಳ್ಳಿ ಗ್ರಾಮದ ಪ್ರಭಾವತಿ ದೇವೇಂದ್ರ (36), ಯಾದಮ್ಮ ಅಷ್ಮಿತ (40), ಗುಂಡಮ್ಮಾ ನರಸಿಂಗ (60), ಜಗಮ್ಮಾ ಪ್ರಭು (34), ರುಕ್ಮಿಣಿಬಾಯಿ ಅಮೃತ (60), ಈಶ್ವರಮ್ಮ ಬಕ್ಕಪ್ಪ (55) ಪಾರ್ವತಿ ಮಾರುತಿ (42) ಮೃತ ದುರ್ದೈವಿಗಳಾಗಿದ್ದಾರೆ. ಎಲ್ಲರೂ ಕೃಷಿ ಕಾರ್ಮಿಕರಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಮರಳುತಿದ್ದಾಗ ಅವಘಡ ಸಂಭವಿಸಿದೆ.
ಆಟೊ ಚಾಲಕ ಉಡಬನಳ್ಳಿಯ ಜಗನ್ನಾಥ ಸಿದ್ದಪ್ಪ ನಾಟೇಕಾರ (39) ಮತ್ತು ಟಿಪ್ಪರ್ ಚಾಲಕ ಅಶೋಕ ರಾಜಪ್ಪ ಸೇರಿ 11 ಮಂದಿಗೆ ಗಾಯಗಳಾಗಿದು ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಅಪಘಾತಕ್ಕಿಡಾದ ಎರಡೂ ವಾಹನಗಳು ಬೇರೆ ರಾಜ್ಯದ ನೊಂದಣಿ ಹೊಂದಿವೆ. ತೆಲಂಗಾಣದ ನೋಂದಣಿ ಹೊಂದಿದ ಟಿಪ್ಪರ ಮತ್ತು ಆಂಧ್ರ ಪ್ರದೇಶದ ನೋಂದಣಿ ಹೊಂದಿದ ಆಟೊ ಮುಖಾಮುಖಿ ಡಿಕ್ಕಿಯಾಗಿವೆ.
ಆಟೊದಲ್ಲಿ ಒಟ್ಟು 17 ಮಂದಿ ಪ್ರಯಾಣಿಕರು ಇದ್ದರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ, ಅದರಲ್ಲಿ ಒಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಉಡಬನಹಳ್ಳಿ ಗ್ರಾಮದಲ್ಲಿ ಸೂತಕದ ವಾತಾವರಣ ಮನೆ ಮಾಡಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಬೆಮಳಖೆಡಾ ಪೋಲಿಸರು ಬೇಟಿ ಹಾಗೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.