ದೂರದ ಊರುಗಳಿಗೆ ಪ್ರಯಾಣಿಸಲು ಜನರು ವಿಮಾನ ಅಥವಾ ರೈಲನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವಿಮಾನ ಪ್ರಯಾಣ ದುಬಾರಿ ಎನ್ನುವವರು, ಜನಸಾಮಾನ್ಯರ ಮೊದಲ ಆಯ್ಕೆ ಸಾಮಾನ್ಯವಾಗಿ ರೈಲಾಗಿರುತ್ತದೆ. ಭಾರತದ ಮೂಲೆ – ಮೂಲೆಗಳಿಗೂ ರೈಲು ಸಂಚಾರದ ವ್ಯವಸ್ಥೆಯಾಗ್ತಿದೆ. ರೈಲಿನ ಪ್ರಯಾಣವನ್ನು ಅತ್ಯಂತ ಸುಖಕರ ಪ್ರಯಾಣಗಳಲ್ಲಿ ಒಂದು ಎನ್ನಬಹುದು. ಪ್ರತಿ ದಿನ ರೈಲಿನಲ್ಲಿ ಪ್ರಯಾಣ ಬೆಳೆಸುವವರು ಅನೇಕರಿದ್ದಾರೆ. ಎರಡರಿಂದ ಮೂರು ಗಂಟೆ ರೈಲಿನಲ್ಲಿ ಪ್ರಯಾಣ ಬೆಳೆಸಿ, ಉದ್ಯೋಗ ಮಾಡುವವರಿದ್ದಾರೆ. ರೈಲನ್ನು ಮೊದಲ ಬಾರಿ ಏರಿರಲಿ ಇಲ್ಲ ಅನೇಕ ಬಾರಿ ರೈಲಿನಲ್ಲಿ ಪ್ರಯಾಣ ಬೆಳೆಸಿರಲಿ, ಕೆಲ ಪ್ರಯಾಣಿಕರಿಗೆ ರೈಲಿನ ನಿಯಮಗಳು ಸರಿಯಾಗಿ ತಿಳಿದಿರೋದಿಲ್ಲ.
ರೈಲಿನಲ್ಲಿ ಪ್ರಯಾಣ ಬೆಳೆಸುವ ವೇಳೆ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಬಾರದು ಎಂದಾದ್ರೆ ನೀವು ಅನೇಕ ವಿಷಯಗಳನ್ನು ತಿಳಿದಿರಬೇಕು. ಇಲ್ಲವೆಂದ್ರೆ ನೀವು ಸುಖಾಸುಮ್ಮನೆ ದಂಡ ಪಾವತಿಸಬೇಕಾಗುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ನೀವು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ.
ವೇಟಿಂಗ್ ಟಿಕೆಟ್ ಕ್ಯಾನ್ಸಲ್ ಆದ್ರೆ ಏನು ಮಾಡ್ಬೇಕು ಗೊತ್ತಾ? : ಟಿಕೆಟ್ ಬುಕ್ ಮಾಡಿದ ತಕ್ಷಣ ರೈಲಿನ ಟಿಕೆಟ್ ಕನ್ಫರ್ಮ್ ಆಗೋದಿಲ್ಲ. ಅನೇಕ ಬಾರಿ ನಮ್ಮ ಹೆಸರು ವೇಟಿಂಗ್ ಲೀಸ್ಟ್ ನಲ್ಲಿರುತ್ತದೆ. ನಂತ್ರ ಈ ವೇಟಿಂಕ್ ಟಿಕೆಟ್ ರದ್ದಾಗುತ್ತದೆ. ಪ್ರಯಾಣಿಕರು ಈ ವೇಟಿಂಗ್ ಟಿಕೆಟ್ ಹಿಡಿದು ಪ್ರಯಾಣ ಬೆಳೆಸಬಾರದು. ಆನ್‌ಲೈನ್‌ನಲ್ಲಿ ವೇಟಿಂಗ್ ಟಿಕೆಟ್ ತೆಗೆದುಕೊಂಡಿದ್ದು, ಅದು ಸ್ವಯಂಚಾಲಿತವಾಗಿ ರದ್ದುಗೊಂಡಿದ್ದರೆ ನೀವು ರೈಲಿನಲ್ಲಿ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಆ ಟಿಕೆಟ್ ಹಿಡಿದು ನೀವು ರೈಲು ಏರಿದ್ರೆ ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುತ್ತಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಪ್ರಯಾಣದ ಶುಲ್ಕದ ಜೊತೆ 250 ರೂಪಾಯಿ ದಂಡ ವಿಧಿಸಲಾಗುತ್ತದೆ. ಕೆಲವು ಬಾರಿ ರೈಲಿನ ಟಿಟಿ ನಿಮ್ಮನ್ನು ಮುಂದಿನ ನಿಲ್ದಾಣದಲ್ಲಿ ಇಳಿಯುವಂತೆ ಹೇಳಬಹುದು. ಇದ್ರಿಂದ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ವೇಟಿಂಗ್ ಟಿಕೆಟ್ ರದ್ದಾದ್ಮೇಲೆ ಅದನ್ನು ಹಿಡಿದು ಹೋಗ್ಬೇಡಿ.
ನಿಮ್ಮದಲ್ಲದ ಕೋಚ್ ನಲ್ಲಿ ಪ್ರಯಾಣಿಸುವ ಸಾಹಸ ಬೇಡ : ನೀವು ಯಾವ ಕೋಚ್ ನ ಟಿಕೆಟ್ ತೆಗೆದುಕೊಂಡಿದ್ದೀರೋ ಅದೇ ಕೋಚ್‌ನಲ್ಲಿ ಪ್ರಯಾಣಿಸಬೇಕು. ನೀವು ಹಾಗೆ ಮಾಡದೆ ಉನ್ನತ ದರ್ಜೆಯ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುವುದು ಕಂಡುಬಂದರೆ ನಿಮ್ಮ ವಿರುದ್ಧ ರೈಲ್ವೆ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು. ಅಲ್ಲದೆ ನೀವು ದಂಡ ತೆರಬೇಕಾಗುತ್ತದೆ. ನೀವು 250 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಇದಲ್ಲದೆ ನೀವು ಎಷ್ಟು ದೂರ ಈ ಕಂಪಾರ್ಟ್ಮೆಂಟ್ ನಲ್ಲಿ ಪ್ರಯಾಣ ಬೆಳೆಸಿದ್ದೀರಿ ಅದ್ರ ಶುಲ್ಕವನ್ನು ಕೂಡ ನೀಡಬೇಕಾಗುತ್ತದೆ.
ರೈಲಿನಲ್ಲಿ ಪೋಸ್ಟರ್ ಹಚ್ಚಲು ಹೋಗ್ಬೇಡಿ : ರೈಲಿನಲ್ಲಿ ಪೋಸ್ಟರ್ ಅಂಟಿಸಿರುವುದನ್ನು ನೀವು ನೋಡಿರಬಹುದು. ಆದರೆ ಹಾಗೆ ಮಾಡುವುದು ಕೂಡ ಅಪರಾಧ. ರೈಲಿನಲ್ಲಿ ಪೋಸ್ಟರ್ ಅಂಟಿಸಿದ್ರೆ ರೈಲ್ವೆ ಕಾಯಿದೆಯ ಸೆಕ್ಷನ್ 166B ಪ್ರಕಾರ ನಿಮಗೆ 6 ತಿಂಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಅಲ್ಲದೆ ನೀವು 500 ರೂಪಾಯಿ ದಂಡ ಕೂಡ ಪಾವತಿಸಬೇಕಾಗುತ್ತದೆ. ಹಾಗಾಗಿ ನೀವು ರೈಲಿನಲ್ಲಿ ಯಾವುದೇ ಪೋಸ್ಟರ್ ಹಚ್ಚುವ ಹುಚ್ಚು ಕೆಲಸ ಮಾಡಬೇಡಿ. ಕಾಯ್ದಿರಿಸಿ ಕೋಚ್ ನಲ್ಲಿ ಪ್ರಯಾಣಿಸಬೇಡಿ : ನೀವು ಕಾಯ್ದಿರಿಸಿದ ಕೋಚ್ ನಲ್ಲಿ ಪ್ರಯಾಣ ಬೆಳೆಸಬೇಕೆಂದ್ರೆ ಟಿಕೆಟ್ ಹೊಂದಿರಬೇಕು. ನಿಮ್ಮ ಬಳಿ ಟಿಕೆಟ್ ಇಲ್ಲದೆ ಇದ್ರೂ ನೀವು ಕಾಯ್ದಿರಿಸಿ ಕೋಚ್ ಗೆ ಹೋದ್ರೆ ದಂಡ ವಿಧಿಸಲಾಗುತ್ತದೆ. ಈ ಅಪರಾಧದ ಮೇಲೆ ರೈಲ್ವೆ ಕಾಯಿದೆಯ ಸೆಕ್ಷನ್ 155 (ಎ) ಅಡಿಯಲ್ಲಿ 3 ತಿಂಗಳ ಜೈಲು ಶಿಕ್ಷೆ ಮತ್ತು 500 ದಂಡ ವಿಧಿಸುವ ಸಾಧ್ಯತೆಯಿರುತ್ತದೆ.