ಬೆಂಗಳೂರು: ಮಾವಿನ ಹಣ್ಣು, ದೇವರ ಪ್ರಸಾದ, ಪವಿತ್ರ ಗಂಗಾ ಜಲ ಇನ್ನಿತರ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿ ಯಶಸ್ವಿ ಆಗಿರುವ ಅಂಚೆ ಇಲಾಖೆ, ಇದೀಗ ಕೈಗಾರಿಕೆ ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿದೆ. ಭಾರತೀಯ ರೈಲ್ವೆ ಇಲಾಖೆಯೊಂದಿಗೆ ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ಸೆಂಟ್ರೆಲ್ ರೈಲ್ವೆ ವಿಭಾಗದಲ್ಲಿ ಈಗಾಗಲೇ ಈ ಪಾರ್ಸೆಲ್ ಸೇವೆ ಯಶಸ್ವಿ ಕಾರ್ಯಾರಂಭ ಮಾಡಿದೆ. ಈ ಸೇವೆಯ ಪ್ರಾಯೋಗಿಕ ಕಾರ್ಯ ದಕ್ಷಿಣ ಭಾರತದಲ್ಲಿ ಬೆಂಗಳೂರಿನಲ್ಲಿ ನಡೆದಿದೆ.ಆರಂಭಿಕ ಹಂತದಲ್ಲಿ ಅಗರಬತ್ತಿ ಸೇರಿದಂತೆ ಇನ್ನಿತರ ಜವಳಿ ಉತ್ಪನ್ನಗಳನ್ನು ರೈಲ್ವೆ ಮೂಲಕ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಕೆಲಸ ನಡೆಯಲಿದೆ.
ಇದು ಯಶಸ್ವಿಯಾದ ಬಳಿಕ ಕೈಗಾರಿಕಾ ಉತ್ಪನ್ನಗಳು, ಗೃಹಪ ಯೋಗಿ ವಸ್ತುಗಳನ್ನು ಪಾರ್ಸೆಲ್ ಮೂಲಕ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜನರ ಮನೆಗಳಿಗೆ ಪಾರ್ಸೆಲ್ ಸೇವೆಗಳನ್ನು ತಲುಪಿಸಲು ರೈಲ್ವೆ ವಿಭಾಗ, ಇಂಡಿಯಾ ಪೋಸ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಡಂಬಡಿಕೆಯ ಪ್ರಕಾರ ರೈಲ್ವೆಯ ಪಾರ್ಸೆಲ್ ವಿಭಾಗದಿಂದ ಪಾರ್ಸೆಲ್ ಅನ್ನು ಜನರ ಮನೆಗೆ ತಲುಪಿಸುವ ಕೆಲಸವನ್ನು ಅಂಚೆ ಇಲಾಖೆ ಮಾಡಲಿದೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಪ್ರಾಯೋಗಿಕ ಕಾರ್ಯದಲ್ಲಿ ಬೆಂಗಳೂರಿನಿಂದ ವಿಶಾಖಪಟ್ಟಣಂಗೆ 1.5 ಟನ್ ಅಗರಬತ್ತಿಯನ್ನು ಕಳುಹಿಸಿಕೊಡಲಾಯಿತು. ಮುಂದಿನ ದಿನಗಳಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಯೋಜನೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ. ಪಾರ್ಸೆಲ್ ಬುಕ್ಕಿಂಗ್ ಹೇಗೆ?: ವ್ಯಕ್ತಿ ಅಥವಾ ಯಾವುದೇ ಕಂಪನಿ ಅಥವಾ ಉದ್ಯಮಿ ಈ ಸೌಕರ್ಯದ ಲಾಭ ಪಡೆಯಬಹುದಾಗಿದೆ. ಅಷ್ಟೇ ಅಲ್ಲ ಈ ಸೌಕರ್ಯ ಪಡೆಯಲು ಅತ್ಯಲ್ಪ ಶುಲ್ಕ ಪಾವತಿಸಬೇಕಾಗಲಿದೆ. ಈ ಸೇವೆಗಾಗಿಯೇ ಭಾರತೀಯ ರೈಲ್ವೆ ಮತ್ತು ಭಾರತೀಯ ಅಂಚೆ ಇಲಾಖೆ ಇದಕ್ಕಾಗಿ ಜಂಟಿಯಾಗಿ ಜಾಯಿಂಟ್ ಪಾರ್ಸೆಲ್ ಪ್ರಾಡಕ್ಟ್ (ಜೆಪಿಪಿ)ಎಂಬ ವ್ಯವಸ್ಥೆ ರೂಪಿಸಿವೆ. ಅಂಚೆ ಇಲಾಖೆ ಅಧಿಕಾರಿಗಳು ರೈಲ್ವೆ ಪೋರ್ಟಲ್ನಲ್ಲೆ ಬುಕಿಂಗ್ ಮಾಡಲಿದ್ದಾರೆ.
ಈ ಮೊದಲು ಗ್ರಾಹಕರು ತಮ್ಮ ವಸ್ತುಗಳನ್ನು ರೈಲ್ವೆ ಪಾರ್ಸೆಲ್ ಅನ್ನು ಒಂದು ಕಡೆಯಿಂದ ಮತ್ತೂಂದು ಕಡೆ ಕಳಿಸಬೇಕಾದರೆ ಖುದ್ದಾಗಿ ಅವರೇ ರೈಲ್ವೆ ಸ್ಟೇಷನ್ ಗೆ ಹೋಗಿ ಬುಕಿಂಗ್ ಮಾಡಬೇಕಾಗಿತ್ತು. ಜತೆಗೆ ತಮ್ಮ ವಸ್ತುಗಳನ್ನು ಪಡೆಯಬೇಕಾಗಿತ್ತು. ಆದರೆ ಇದೀಗ ಹೊಸ ವ್ಯವಸ್ಥೆ ಜಾರಿಯಿಂದ ಅಂಚೆ ಸಿಬ್ಬಂದಿಯೇ ರೈಲ್ವೆ ಸ್ಟೇಷನ್ಗೆ ಹೋಗಿ ಪಾರ್ಸಲ್ ನೀಡಲಿದ್ದಾರೆ. ಜತೆಗೆ ರೈಲ್ವೆ ಸ್ಟೇಷನ್ನಿಂದ ಪಾರ್ಸೆಲ್ ಪಡೆದು ಗ್ರಾಹಕರ ಮನೆಬಾಗಿಲಿಗೆ ತಲುಪಿಸಲಿದ್ದಾರೆ.
ಸೆಂಟ್ರಲ್ ರೈಲ್ವೆ ವಿಭಾಗ ಮುಂಬೈ, ಪುಣೆ ಮತ್ತು ನಾಗ್ಪುರದಲ್ಲಿ ಈ ಸೇವೆಯನ್ನು ಆರಂಭಿಸಿದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಈ ಸೇವೆಯ ಪ್ರಾಯೋಗಿಕ ಕಾರ್ಯ ಬೆಂಗಳೂರು-ವಿಖಾಪಟ್ಟಣಂ ಮೂಲಕ ಆರಂಭವಾಗಿದೆ. ಉದ್ಯಮಿಗಳು ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಯೋಜನೆ ವಿಸ್ತಾರಿಸುವ ಚಿಂತನೆ ಕೂಡ ನಡೆದಿದೆ.