ಮೈಸೂರು: ಅದು ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವತಿಯ ಶವ. ಇದು ಕೊಲೆಯೋ.. ಆತ್ಮಹತ್ಯೆಯೋ.. ಎಂಬ ಗೊಂದಲದಲ್ಲಿದ್ದ ಪೊಲೀಸರಿಗೆ ಆ ಒಂದು ಕಾಲ್ಗೆಜ್ಜೆ ನೀಡಿತ್ತು ಇಡೀ ಪ್ರಕರಣದ ಸುಳಿವು. ಅಂದಹಾಗೆ ಕಾಲ್ಗೆಜ್ಜೆ ನೀಡಿದ ಸುಳಿವಿನ ಜಾಡು ಹಿಡಿದ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ ಪ್ರಕರಣವನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕೆಲ್ಲೂರು ರಸ್ತೆ ಬದಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವತಿಯ ಶವ ಪ್ರಕರಣವನ್ನ ಭೇದಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತ ಯುವತಿಯನ್ನ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಭಾಗ್ಯ (18) ಎಂದು ಗುರುತಿಸಲಾಗಿದ್ದು, ತನ್ನ ಪ್ರಿಯಕರನಿಂದಲೇ ಹತ್ಯೆಯಾಗಿರೋದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಕಳೆದ ನವಂಬರ್ 8 ರಂದು ಪಿರಿಯಾಪಟ್ಟಣ ತಾಲ್ಲೂಕಿನ ಕೆಲ್ಲೂರು ರಸ್ತೆ ಬದಿಯಲ್ಲಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಭಾಗ್ಯ ಅವರ ಶವ ಪತ್ತೆಯಾಗಿತ್ತು. ನಂಜನಗೂಡು ತಾಲ್ಲೂಕಿನ ಕರಳಾಪುರದ ಸಿದ್ದರಾಜು ಹಾಗೂ ಹುಲ್ಲಹಳ್ಳಿಯಲ್ಲಿ ವಕೀಲರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದ ಭಾಗ್ಯ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಸಿದ್ದರಾಜು ಭಾಗ್ಯಳ ಜೊತೆ ದೈಹಿಕ ಸಂಬಂಧವನ್ನೂ ಹೊಂದಿದ್ದ ಎನ್ನಲಾಗಿದೆ. ದಿನ ಕಳೆದಂತೆ ಸಿದ್ದರಾಜು ಭಾಗ್ಯಳನ್ನ ಅವಾಯ್ಡ್ ಮಾಡಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಭಾಗ್ಯ ಮದುವೆಯಾಗು, ಇಲ್ಲ ಅಂದ್ರೆ ನಾನು ಡೆತ್ ನೋಟ್ ಬರೆದಿಟ್ಟು ಸಾಯ್ತೀನಿ ಅಂತ ಎಚ್ಚರಿಕೆ ನೀಡಿದ್ದಳು. ಆದರೆ, ಮದುವೆ ಆಗಲು ನಿರಾಕರಿಸಿದ್ದ ಪಾಪಿ ಸಿದ್ದರಾಜು, ಭಾಗ್ಯಳನ್ನ ಕೊಲೆ ಮಾಡಲು ಸ್ಕೆಚ್ ಹಾಕಿದ್ದ.
ಅದರಂತೆ ತನ್ನ ಸ್ನೇಹಿತ ಪ್ರಸನ್ನ ಕುಮಾರ್ ಜೊತೆ ಸ್ಕೆಚ್ ಹಾಕಿ, ಭಾಗ್ಯಳನ್ನ ಬಾ ಧರ್ಮಸ್ಥಳಕ್ಕೆ ಹೋಗಿ ಮದುವೆಯಾಗೋಣ ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದ. ಪಿರಿಯಾಪಟ್ಟಣ ಬಳಿ ತೆರಳುತ್ತಿದ್ದಂತೆ ಕೆಲ್ಲೂರು ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ, ಉಸಿರುಗಟ್ಟಿಸಿ ಭಾಗ್ಯಳನ್ನ ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಬಳಿಕ ರಸ್ತೆ ಬದಿ ಅರೆಬೆಂದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪಿರಿಯಾಪಟ್ಟಣ ಪೊಲೀಸರು ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಂಡಿದ್ರು. ಈ ನಡುವೆ ಭಾಗ್ಯಳ ತಂದೆ ನಂಜನಗೂಡಿನ ಹುಲ್ಲಹಳ್ಳಿ ಠಾಣೆಯಲ್ಲಿ ತಮ್ಮ ಮಗಳು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಅರೆಬೆಂದ ಸ್ಥಿತಿಯ ಯುವತಿಯ ಶವವನ್ನ ನೋಡಿದ ಪೋಷಕರು ಇದು ಭಾಗ್ಯಳ ಶವ ಅಲ್ಲ ಅಂದುಕೊಂಡಿದ್ರು. ಆದ್ರೆ ಇನ್ನೇನು ವಾಪಾಸ್ ಆಗೋಣ ಅನ್ನುವ ವೇಳೆಗೆ ಮೃತ ಯುವತಿಯ ಕಾಲಿನಲ್ಲಿ ಕಾಲ್ಗೆಜ್ಜೆಯನ್ನ ನೋಡಿದ್ದಾರೆ. ಅಲ್ಲೆ ಬರಸಿಡಿಲು ಬಡಿದಂತೆ ಇದು ನಮ್ಮ ಮಗಳೇ ಸ್ವಾಮಿ ಅಂದಿದ್ಧಾರೆ. ಕೂಡಲೇ ಎಚ್ಚೆತುಕೊಂಡ ಪೊಲೀಸರು ಪ್ರಕರಣದ ಬೆನ್ನತ್ತಿದ್ದಾರೆ. ಹೀಗೆ ಬೆನ್ನತ್ತಿ ಹೊರಟ ಪೊಲೀಸರಿಗೆ ಭಾಗ್ಯಳ ಪ್ರಿಯಕರ ಸಿದ್ದರಾಜು ಕೊಲೆ ಮಾಡಿರೋದು ಕಂಡು ಬಂದಿದೆ. ಈ ಸಂಬಂಧ ಪ್ರಿಯಕರ ಸಿದ್ದರಾಜು, ಹತ್ಯೆಗೆ ಸಹಕರಿಸಿದ ಪ್ರಸನ್ನ ಕುಮಾರ್ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.