ಕಲಬುರಗಿ: ಪ್ರಪಂಚದಲ್ಲಿ ಎಂತಂಥವರೆಲ್ಲಾ ಇರ್ತಾರಲ್ಲಾ ಅನ್ನೊದಕ್ಕೆ ಮತ್ತೊಂದು ಪ್ರಸಂಗ ಸಾಕ್ಷಿಯಾಗಿದೆ. ಸೊಸೆಯೊಬ್ಬಳು ತನ್ನ ಗಂಡನ ತಾಯಿ (ಅತ್ತೆ) ಬೇಗ ಸಾಯಬೇಕು ಎಂದು ಹರಕೆ ಹೊತ್ತಿದ್ದಾಳೆ.
ಹೀಗಂತ 50 ರೂಪಾಯಿ ನೋಟಿನ ಮೇಲೆ ಬರೆದು ದೇವರ ಹುಂಡಿಗೆ ಕಾಣಿಕೆ ಹಾಕಿದ್ದಾಳೆ ಈ ಸೊಸೆ ಮಹಾಶಯಳು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಸೊಸೆ ಹಾಕಿದ ಕಾಣಿಕೆಯ 50 ರೂ. ನ ಈ ನೋಟು ಸಿಕ್ಕಿದೆ.
ಬೇಡಿದ ವರ ಕೊಡುವ ಶ್ರೀಕ್ಷೇತ್ರ ದತ್ತಾತ್ರೇಯನ ಹುಂಡಿಯಲ್ಲಿ ಇಂಥ ವಿಕೃತ ಹರಕೆ ಹೊತ್ತು ಹಾಕಿದ ಕಾಣಿಕೆಯ ನೋಟು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕಳೆದ ಕೆಲ ದಿನಗಳ ಹಿಂದೆ ದೇವಲಗಾಣಗಾಪುರ ದತ್ತನಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಹುಂಡಿ ಎಣಿಕೆ ಕಾರ್ಯದಲ್ಲಿ 50 ರೂಪಾಯಿ ಮುಖ ಬೆಲೆಯ ಈ ನೋಟು ಪತ್ತೆಯಾಗಿತ್ತು. ಆ ನೋಟಿನ ಮೇಲೆ ಅತ್ತೆ ಬೆಗ ಸಾಯಲಿ ಎಂದು ಬರೆದು ಹರಕೆ ಹೊತ್ತಿದ್ದು ಇದೀಗ ವೈರಲ್ ಆಗಿದೆ.