ಕೂಗು ನಿಮ್ಮದು ಧ್ವನಿ ನಮ್ಮದು

ಅಭಿವೃದ್ಧಿಗೆ ಕೃತಜ್ಞತೆ: ಶಾಸಕರ ಮನೆಗೇ ಬಂದು ಸನ್ಮಾನಿಸಿದ ಗ್ರಾಮಸ್ಥರು

ಬೆಳಗಾವಿ: ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡಿದಾಗ ಅದು ಅವರ ಕರ್ತವ್ಯ ಎಂದೇ ಪರಿಗಣಿಸಿ ಜನ ಕೇವಲ ‘ಧನ್ಯವಾದ’ ಹೇಳಿ ಮುಗಿಸುವುದು ಸಾಮಾನ್ಯ. ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸಾಂಬ್ರಾ ಗ್ರಾಮಸ್ಥರು ಮನೆಗೇ ಬಂದು ಸನ್ಮಾನಿಸಿ ಕೃತಜ್ಞತೆ ಸಲ್ಲಿಸುವ ಮೂಲಕ ಕ್ಷೇತ್ರದ ಜನತೆ ಉಪಕೃತ ಭಾವನೆ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 30 ಲಕ್ಷ ರೂ. ಬಿಡುಗಡೆ ಮಾಡಿಸಿಕೊಟ್ಟ ಹಿನ್ನೆಲೆಯಲ್ಲಿ ಇಂದು ಸಾಂಬ್ರಾ ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳಕರ ಅವರ  ಗೃಹ ಕಚೇರಿಗೆ ಆಗಮಿಸಿ, ಹರಸಿ, ಆಶೀರ್ವದಿಸಿ ಸತ್ಕರಿಸಿದರು.

ಗ್ರಾಮದ ಅಭಿವೃದ್ಧಿಗೆ ಹಿಂದೆಂದೂ ನೀಡದ ಕಾಣಿಕೆ ನೀಡಿರುವ ಬಗ್ಗೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೃತಜ್ಞತೆ ಅರ್ಪಿಸಿದ ಗ್ರಾಮಸ್ಥರು, ಕ್ಷೇತ್ರದ ಏಳಿಗೆಗೆ ಕಂಕಣಬದ್ಧರಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸದಾ ತಮ್ಮ ಬೆಂಬಲವಿರುವುದಾಗಿ  ಹೇಳಿದರಲ್ಲದೆ, ”ನೀವು ಸದಾ ನಮ್ಮೊಂದಿಗೆ, ನಾವು ಸದಾ ನಿಮ್ಮೊಂದಿಗೆ” ಎಂಬ ಅಭಯ ನೀಡಿದರು.

ಅವರ ಈ ತುಂಬು ಹೃದಯ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಹಾಗೂ ವಾತ್ಸಲ್ಯಭರಿತ ಸನ್ಮಾನಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿರಲ್ಲದೆ, ಇನ್ನೂ ಹೆಚ್ಚಿನ ಅಭಿವೃದ್ಧಿಗೆ ತಾವು ಕಟಿಬದ್ಧರಾಗಿದ್ದು ಜನತೆಯ ಈ ಪ್ರೀತಿ, ವಿಶ್ವಾಸ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳಿಗೆ ತಮ್ಮನ್ನು ಪ್ರೋತ್ಸಾಹಿಸಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಕಲ್ಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಂತೋಷ ಅಣ್ಣಪ್ಪ ದೇಸಾಯಿ, ಉಪಾಧ್ಯಕ್ಷ ಶಿವಾಜಿ ಹಿರೋಜಿ ಸದಸ್ಯರಾದ ಭೈರು ಹಿರೋಜಿ, ದಶರಥ ಗುರವ ಉಮೇಶ ಮಾಸ್ತಮರ್ಡಿ, ಅರವಿಂದ ನಾಯ್ಕ, ದೇವಪ್ಪ ಹಿರೋಜಿ, ನಾಗರಾಜ ಪೂಜೇರಿ, ಪರಶುರಾಮ ಭಾತ್ಕಂಡೆ, ಮಾರುತಿ ಹಿರೋಜಿ, ಶಂಕರ ಗುರವ, ಪ್ರಕಾಶ ಮುಚ್ಚಂಡಿ, ಕಾಕಾಸಾಹೇಬ ಶಾಸನ, ಗಜಾನನ ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಆಗಮಿಸಿದ್ದು ವಿಶೇಷ.

error: Content is protected !!