ಗದಗ: ತಡರಾತ್ರಿ ಗದಗದ ಜನ ಬೆಚ್ಚಿ ಬಿದ್ದಿದ್ದಾರೆ. ರಾತ್ರಿ ಹೊತ್ತು ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಗದಗದ ದಾಸರ ಓಣಿಯಲ್ಲಿ ಈ ಘಟನೆ ನಡೆದಿದ್ದು ಇಡಿ ಗದಗವೇ ತಲ್ಲಣಗೊಳ್ಳುವಂತೆ ಮಾಡಿದೆ. ಗದಗ ಜಿಲ್ಲೆಯ ಬೇಟಗೇರಿ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರು ಕೊಲೆಗಿಡಾಗಿದ್ದಾರೆ.
ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55) ಪತ್ನಿ ಲಕ್ಷ್ಮಿ (45), ಪುತ್ರಿ ಆಕಾಂಕ್ಷಾ (16) ಕೊಲೆಯಾಗಿದ್ದಾರೆ. ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಹಂತಕರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೃತ ನಾಲ್ವರ ಪೈಕಿ ಮೂವರು ದಾಸರ ಓಣಿಯಲ್ಲಿ ತಮ್ಮ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದರು. ಈ ಮೂವರು ಮೂಲತಃ ಕೊಪ್ಪಳ ಜಿಲ್ಲೆಯವರು. ಏಪ್ರಿಲ್ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್‌ನ ಮದುವೆ ಸಹ ನಡೆದಿತ್ತು. ವಿವಾಹ ಕಾರ್ಯಕ್ರಮಕ್ಕಾಗಿ ಸಂಬಂಧಿಕರು ಆಗಮಿಸಿದ್ದರು ಎಂದು ಹೇಳಲಾಗಿದೆ.
ಸದ್ಯ ಸ್ಥಳಕ್ಕೆ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಎಸ್ಪಿ ಬಿ.ಎಸ್.ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಹಂತಕರ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ.