ಮಂಡ್ಯ: ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. 8 ಬಾರಿ ಕಾರು ಪಲ್ಟಿಯಾಗಿದೆ. ಆದರೆ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳೂ ಸಂಭವಿಸದೆ, ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಬೆಂಗಳೂರಿನ ಆರ್.ಟಿ.ನಗರ ನಿವಾಸಿ ವಿನೋದ್ (46) ಹಾಗೂ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾದ ಅಧೃಷ್ಟಶಾಲಿಗಳಾಗಿದ್ದಾರೆ.
ವಿನೋದ್ ಜ್ಯುವೆಲ್ಲರಿ ಶಾಪ್ ಮಾಲೀಕರಾಗಿದ್ದು, ಚಾಮರಾಜನಗರದ ಕನಕಗಿರಿ ಮಠಕ್ಕೆ ತೆರಳಿ ಪೀಠಾಧಿಪತಿಗಳ ಆಶೀರ್ವಾದ ಪಡೆದು ನಂತರ ಬೆಂಗಳೂರು ಕಡೆಗೆ ಮಹೇಂದ್ರ XUV ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಕಾರು ಮದ್ದೂರಿನ ಫ್ಲೈ ಓವರ್ ಇಳಿಯುತ್ತಿದ್ದಂತೆ ಕಾರಿನ ಮುಂಭಾಗದ ಎಡ ಭಾಗದ ಟೈರ್ ಸ್ಪೋಟಗೊಂಡು 8 ರಿಂದ 9 ಭಾರಿ ಜಾರು ಪಲ್ಟಿ ಹೊಡೆದು ಡಿವೈಡರ್ ಗೆ ಗುದ್ದಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಕಾರಿನ ವಿವಿಧ ಭಾಗಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ತಕ್ಷಣವೇ ವಾಹನ ಸವಾರರು ಹಾಗೂ ಸ್ಥಳೀಯರು ಧಾವಿಸಿ ಕಾರಿನಲ್ಲಿದ್ದವರನ್ನು ಹೊರ ತೆಗೆದು ರಕ್ಷಿಸಿದ್ದಾರೆ. ಸ್ಥಳಕ್ಕೆ ಮದ್ದೂರು ಸಂಚಾರ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜೆ.ಇ.ಮಹೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮದ್ದೂರು ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ತಪ್ಪದೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಂದು ನಡೆದಿರುವ ಭೀಕರ ಅಪಘಾತದಲ್ಲಿ ಸೀಟ್ ಬೆಲ್ಟ್ ಹಾಕಿರುವ ಪರಿಣಾಮ ಪ್ರಯಾಣಿಕರಿಗೆ ಯಾವುದೇ ರೀತಿಯ ಸಣ್ಣ ಪುಟ್ಟ ಗಾಯಗಳಾಗಿಲ್ಲ ಹಾಗಾಗಿ ಪ್ರಯಾಣಿಕರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ಪ್ರಯಾಣಿಸಿ ಎಂದು ಸಂಚಾರ ಪೋಲೀಸ್ ಠಾಣೆಯ ಸಬ್ ಸಬ್ ಇನ್ಸ್ಪೆಕ್ಟರ್ ಜೆ.ಇ.ಮಹೇಶ್ ಮನವಿ ಮಾಡಿದ್ದಾರೆ.