ಕೂಗು ನಿಮ್ಮದು ಧ್ವನಿ ನಮ್ಮದು

ಸರ್ಕಾರಿ ಶಾಲೆ ಕಟ್ಟಲು ಜೋಳಿಗೆ ಹಿಡಿದ ಸ್ವಾಮೀಜಿ; ಸಂಗ್ರಹವಾಯ್ತು ನಲವತ್ತು ಲಕ್ಷ!

ಕಲಬುರಗಿ: ಜೋಳಿಗೆ ಹಿಡಿದು ಮನೆ ಮನೆಗೆ ತೆರಳುತ್ತಿರುವ ಸ್ವಾಮೀಜಿ. ಅವರ ಜೊತೆಗೆ ಹೆಜ್ಜೆ ಹಾಕ್ತಿರೋ ಗ್ರಾಮಸ್ಥರು. ಚೀಲ ತೆರೆದು ನೋಡಿದ್ರೆ ಝಣ ಝಣ ಎನ್ನುತ್ತಿದೆ ಹಣ. ಆದ್ರೆ ಇದು ಮಠ ಅಭಿವೃದ್ಧಿಗೋ, ದಾಸೋಹಕ್ಕಾಗಿಯೋ ಸ್ವಾಮೀಜಿಗಳು ಕೈಗೊಂಡ ಜೋಳಿಗೆ ಯಾತ್ರೆಯಲ್ಲ. ಬದಲಿಗೆ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕಾಗಿ ಹಿಡಿದ ಅಕ್ಷರ ಜೋಳಿಗೆ. ಕಲಬುರಗಿಯ ಘತ್ತರಗಿ ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ಸೊನ್ನ ವಿರಕ್ತ ಮಠದ ಶಿವಾನಂದ ಮಹಾ ಸ್ವಾಮೀಜಿ ಜೋಳಿಗೆ ಹಿಡಿದು ಹೊರಟಿದ್ದಾರೆ. ಸ್ವಾಮೀಜಿಗಳೆಂದರೆ ಧಾರ್ಮಿಕ ಚೌಕಟ್ಟಿನಲ್ಲಿದ್ದು ಪುರಾಣ ಪ್ರವಚನ ಮಾಡುವವರು ಅಂದ್ಕೊಳ್ಳೋರೆ ಜಾಸ್ತಿ. ಆದರೆ ಶಿವಾನಂದ ಮಹಾಸ್ವಾಮೀಜಿಗಳು ಸರ್ಕಾರಿ ಶಾಲೆಗಾಗಿ ಹೆಜ್ಜೆ ಹಾಕ್ತಿದ್ದಾರೆ.

ಸ್ವಾಮೀಜಿಗಳ ಈ ನಿಸ್ವಾರ್ಥ ಸೇವೆಯನ್ನು ಕಂಡು ಜನ ಕೂಡಾ ಕಂತೆ ಕಂತೆ ಹಣ ಜೋಳಿಗೆಗೆ ಹಾಕುತ್ತಿದ್ದಾರೆ. ಹೀಗಾಗಿಯೇ ನೋಡಿ ಕೇವಲ ಮೂರೇ ದಿನಗಳಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಸಂಗ್ರಹವಾದ ಹಣ 40 ಲಕ್ಷ ದಾಟಿದೆ.
300 ಕ್ಕೂ ಹೆಚ್ಚು ಮಕ್ಕಳ ಓದ್ತಿರುವ ಶಾಲೆ
ಅಂದಹಾಗೆ ಘತ್ತರಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 300 ಕ್ಕೂ ಹೆಚ್ಚು ಮಕ್ಕಳು ಓದ್ತಿದ್ದಾರೆ. ಆದ್ರೆ ಸದ್ಯ ಸರ್ಕಾರಿ ಪ್ರೌಢಶಾಲೆ ಇರೋದು, ಗ್ರಾಮದಲ್ಲಿರುವ ಸುಪ್ರಸಿದ್ದ ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಬಹುತೇಕ ಶಿಥಿಲಗೊಂಡಿದೆ. ಬೀಳುವ ಹಂತ ತಲುಪಿದೆ. ಜೀವ ಭಯದಲ್ಲಿಯೇ ಮಕ್ಕಳು ಪಾಠ ಕೇಳುವಂತಹ ಪರಿಸ್ಥಿತಿಯಿದೆ.

ವಿದ್ಯಾರ್ಥಿಗಳ ಪರದಾಟಕ್ಕೆ ಇದುವೇ ಕಾರಣ
ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ಕೂಡ ನೀಡಿದೆ. ಆದ್ರೆ ಮುಜರಾಯಿ ಇಲಾಖೆ ಮಾತ್ರ, ತಮ್ಮ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡ್ತಿಲ್ಲ. ಇರೋ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲಿಕ್ಕೆ ಅವಕಾಶ ಇಲ್ಲದ ಕಾರಣ ವಿದ್ಯಾರ್ಥಿಗಳು ಪರದಾಡ್ತಿದ್ದಾರೆ. ಸರ್ಕಾರಿ ಶಾಲೆಯಿದ್ದರೂ ವಿದ್ಯಾರ್ಥಿಗಳು ಒಳ್ಳೆ ಕಟ್ಟಡ ಇಲ್ಲದೇ ಪರದಾಡುವಂತಾಗಿದೆ. ಹೀಗಾಗಿ ಗ್ರಾಮದ ಜನರು, ಸ್ವಾಮೀಜಿ ತಾವೇ ಹಣ ಸಂಗ್ರಹಿಸಿ, ಭೂಮಿ ಖರೀದಿ ಮಾಡಿ, ಶಾಲಾ ಕಟ್ಟಡ ನಿರ್ಮಾಣ ಮಾಡಲು ಅಕ್ಷರ ಜೋಳಿಗೆ ಆರಂಭಿಸಿದ್ದಾರೆ.

ಸರ್ಕಾರಿ ಶಾಲೆ ನಿರ್ಮಾಣಕ್ಕೆ ಸರ್ಕಾರದಿಂದ ಭೂಮಿ ಖರೀದಿಸಲು ಅವಕಾಶವಿಲ್ಲದ್ದರಿಂದ, ಗ್ರಾಮದ ಜನರೇ ಇದೀಗ ಭೂಮಿ ಖರೀದಿಗೆ ಮುಂದಾಗಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ವಿವಿಧ ಕಟ್ಟಡ ನಿರ್ಮಾಣಕ್ಕೆ ಐದು ಎಕರೆ ಭೂಮಿ ಖರೀದಿ ಮಾಡಲು ಮುಂದಾಗಿದ್ದಾರೆ.

ರಾತ್ರಿ ಹೊತ್ತಲ್ಲಿ ಪುರಾಣ, ಪ್ರವಚನ ಹಗಲಲ್ಲಿ ಅಕ್ಷರ ಜೋಳಿಗೆ
ಅದಕ್ಕೆ ಬೇಕಾದ ಹಣವನ್ನು ಗ್ರಾಮದಲ್ಲಿ ಅಕ್ಷರ ಜೋಳಿಗೆ ಮೂಲಕ ಜನರಿಂದ ದೇಣಿಗೆ ಸಂಗ್ರಹಿಸ್ತಿದ್ದಾರೆ. ಈ ದೇಣಿಗೆ ಸಂಗ್ರಹಕ್ಕೆ ಸೊನ್ನದ ಶಿವಾನಂದ ಸ್ವಾಮೀಜಿ ನೇತೃತ್ವ ನೀಡಿದ್ದಾರೆ. ಅದಕ್ಕಾಗಿಯೇ ರಾತ್ರಿ ಹೊತ್ತಲ್ಲಿ ಪುರಾಣ, ಪ್ರವಚನ ಆರಂಭಿಸಿರುವ ಸ್ವಾಮೀಜಿ, ಹಗಲೊತ್ತಿನಲ್ಲಿ ಅಕ್ಷರ ಜೋಳಿಗೆ ಹಿಡಿದು, ದೇಣಿಗ ಸಂಗ್ರಹ ಮಾಡುವ ಕೆಲಸವನ್ನು ಮಾಡ್ತಿದ್ದಾರೆ.

ತಾವಾಯ್ತು, ಮಠ ಆಯ್ತು ಅನ್ನದೇ ಮಕ್ಕಳ ಶಿಕ್ಷಣಕ್ಕಾಗಿ ಹೆಜ್ಜೆ ಹಾಕಿರೋ ಸ್ವಾಮಿಗಳ ನಡೆ ಇಡೀ ಊರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಆದಷ್ಟು ಬೇಗ ಘತ್ತರಗಿ ಶಾಲೆಯ ಕಟ್ಟಡ ನಿರ್ಮಾಣವಾಗುತ್ತೆ ಅನ್ನೋ ಆಶಯವೂ ವ್ಯಕ್ತವಾಗಿದೆ.

error: Content is protected !!