ಕೂಗು ನಿಮ್ಮದು ಧ್ವನಿ ನಮ್ಮದು

ಶಾಲೆಗಳನ್ನು ಪುನಾರಂಭಿಸುವಂತೆ ಒತ್ತಾಯ: ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಶಿಕ್ಷಣ ಸಚಿವರಿಗೆ ಮನವಿ

ಬೆಂಗಳೂರು: ಕೊರೊನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಶಾಲೆಗಳನ್ನು ಪುನಾರಂಭಿಸುವಂತೆ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಒತ್ತಾಯಿಸಿ, ಶಿಕ್ಷಣ ಸಚಿವರಿಗೆ ಪತ್ರ ಬರೆದಿದೆ. ಬರೆದ ಪತ್ರದಲ್ಲಿ ಶಾಲೆಯನ್ನು ಏಕೆ ಆರಂಭಿಸಬೇಕೆಂದು ಸಹ ಉಲ್ಲೇಖಿಸಿದೆ. 15 ತಿಂಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಗರ ಪ್ರದೇಶದ ಮಕ್ಕಳಿಗೆ ಮಾತ್ರ ಆನ್ಲೈನ್ ಶಿಕ್ಷಣ ಸಿಕ್ಕಿದೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯವೆಂದು ಪತ್ರದಲ್ಲಿ ಅಭಿಪ್ರಾಯಪಟ್ಟಿದೆ.
ಕೊರೊನಾದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲೆ ಪ್ರಾರಂಭವಾದರೂ ಶೇ.30ರಷ್ಟು ಮಕ್ಕಳು ಶಾಲೆಗೆ ಬರುವುದು ಬಹುತೇಕ ಅನುಮಾನ. ಶಿಕ್ಷಣ ಇಲ್ಲದೆ ಅನೇಕ ಮಕ್ಕಳಿಗೆ ಬಾಲ್ಯ ವಿವಾಹವಾಗಿದೆ. ಶಾಲೆ ಪುನಾರಂಭಿಸದ ಹಿನ್ನೆಲೆ ಬಾಲ ಕಾರ್ಮಿಕರಾಗುತ್ತಿದ್ದಾರೆ. ಇತರೆ ಕಾರಣಗಳಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಆರೋಗ್ಯದ ಜೊತೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಶಾಲಾ ಆಡಳಿತ ಮಂಡಳಿಗಳು ಒತ್ತಾಯಿಸಿದೆ.

ತಜ್ಞರು ಕೂಡ ಶಾಲೆ ಪುನಾರಂಭಕ್ಕೆ ಸಲಹೆ ಕೊಟ್ಟಿದ್ದಾರೆ. ವಿದ್ಯಾಗಮ ಅಥವಾ ಪಾಳಿ ಪದ್ಧತಿಯಲ್ಲಿ ಶಾಲೆಯನ್ನು ಆರಂಭಿಸಿ ಎಂದು ಮನವಿ ಮಾಡಿ ಖಾಸಗಿ ಶಾಲೆಗಳ ಒಕ್ಕೂಟ ನಿನ್ನೆ (ಜೂನ್ 22) ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಮನವಿಯನ್ನು ಒಪ್ಪದ ರಾಜ್ಯ ಸರ್ಕಾರ, ಸದ್ಯಕ್ಕೆ ಶಾಲೆ ಪುನಾರಂಭಿಸಲ್ಲ. ಶಾಲೆ ಆರಂಭಿಸಿದರೆ ದೊಡ್ಡ ಗಂಡಾಂತರ ಎದುರಾಗಲಿದೆ. ಹೀಗಾಗಿ ಶಾಲೆ ಆರಂಭಿಸಲ್ಲ ಎಂದು ಹೇಳುತ್ತಿದೆ. 15ಕ್ಕೂ ಹೆಚ್ಚು ಸಂಘಟನೆಗಳಿಂದ ಪತ್ರ ಶಾಲೆ ಆರಂಭಿಸುವಂತೆ ಕ್ಯಾಮ್ಸ್, ರುಪ್ಸಾ ಕರ್ನಾಟಕ, ಕುಸುಮ, ಮಾಸ್, ಕಿಸಾ, ಮಿಸ್ಕಾ, ಸೇರಿ 15ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟ ಶಿಕ್ಷಣ ಸಚಿವರಿಗೆ ಪತ್ರ ಬರೆದಿದೆ. ತಜ್ಞ ವೈದ್ಯ ಡಾ.ದೇವಿ ಶೆಟ್ಟಿ ಸಮಿತಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಸದ್ಯ ಶಾಲೆ ಆರಂಭ ಮಾಡದಿರಲು ಸರ್ಕಾರ ಹಿಂದೆ ಸರಿದಿದೆ.

error: Content is protected !!