ಮಂಡ್ಯ : ಬಿ.ಗೌಡಗೆರೆ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ನಾನೂ ಮಾಡಿದ್ದೇನೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆಯೇ ಹೊರತು ಯಾರೋ ಮಾಡಿದ ಕೆಲಸಕ್ಕೆ ರಿಬ್ಬನ್ ಕಟ್ ಮಾಡೋದಕ್ಕೆ ನಾನಿಲ್ಲಿಗೆ ಬಂದಿಲ್ಲ. ಅಂತಹ ಚೀಪ್ ಪಬ್ಲಿಸಿಟಿ ನನಗೆ ಬೇಕಾಗಿಯೂ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಗರಂ ಆಗಿಯೇ ನುಡಿದರು.
ತಾಲೂಕಿನ ಬಿ.ಗೌಡಗೆರೆ ಗ್ರಾಮದ ಶ್ರೀಮಹದೇಶ್ವರ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುವಾಗ ಮಧ್ಯೆ ಮಧ್ಯೆ ಪ್ರಶ್ನಿಸುತ್ತಿದ್ದವರಿಗೆ ಚಾಟಿ ಬೀಸಿದ ಸುಮಲತಾ, ಮಾತನಾಡುವಾಗ ಮಧ್ಯೆ ಮಾತನಾಡುವುದು ಸಭ್ಯತೆ ಅಲ್ಲ. ನಿಮಗೂ ಮಾತನಾಡಲು ಒಂದು ಸಮಯ ಬರುತ್ತದೆ. ಈ ಗೊಂದಲ ನೋಡಿ ನನಗೆ ಬೇಸರವಾಗುತ್ತಿದೆ. ಮಹಿಳೆಯರು ಆಸೆಯಿಂದ ಬಂದಿದ್ದಾರೆ. ಪ್ರೀತಿಯಿಂದ ಮಾತನಾಡಿಸುತ್ತಾರೆ. ನೀವು ಮಹಿಳೆಯರಿಂದ ಸಭ್ಯತೆಯ ಪಾಠ ಕಲಿಯಬೇಕು. ಊರಿನ ಕೆಲಸವನ್ನು ಜನಪ್ರತಿನಿಧಿಗಳಿಂದ ಮಾಡಿಸಿಕೊಳ್ಳುವುದಕ್ಕೂ ಒಂದು ಬದ್ಧತೆ ಇದೆ ಎಂದು ಗದ್ದಲ ಮಾಡಿದವರಿಗೆ ಬದ್ಧತೆ ಪಾಠ ಮಾಡಿದರು.
ನಾನು ಬಂದರೆ ನನ್ನನ್ನು ನೋಡುವ ಆಸೆಯಿಂದ ಜನರು ಸೇರುತ್ತಾರೆ. ಕೆಲವರು ಪ್ರಚಾರ ತೆಗೆದುಕೊಳ್ಳುವ ದುರಾಸೆಯಿಂದ ಈ ರೀತಿ ಮಾಡುತ್ತಾರೆ. ಇದರಿಂದ ಯಾರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಪಕ್ಷೇತರ ಸಂಸದೆಗೆ ಒಂದೊಂದು ಕೆಲಸ ಮಾಡಿಸೋದು ಎಷ್ಟುಸವಾಲಾಗಿದೆ. ಆ ಬಗ್ಗೆ ನಿಮ್ಮ ಬಳಿ ಹೇಳಿಕೊಂಡಿದ್ದೇನಾ. ಸರ್ಕಾರ, ಮಂತ್ರಿಗಳು ಅಥವಾ ಅಧಿಕಾರಿಗಳಿರಬಹುದು ಅವರಿಂದ ನನಗೆ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದೆ ತೊಂದರೆ ಕೊಡುತ್ತಿರುವುದನ್ನು ಈ ಮೂರೂವರೆ ವರ್ಷದಲ್ಲಿ ನೋಡಿದ್ದೀನಿ. ಆದರೆ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹಲ್ಲು ಕಚ್ಚಿಕೊಂಡು ಸುಮ್ಮನಿದ್ದೇನೆ ಎಂದರು.
ಸಣ್ಣ ಪುಟ್ಟಗೊಂದಲಗಳಿಗೆ ಈ ರೀತಿ ಮಾಡಿಕೊಂಡರೆ ನಿಮಗೆ ನೀವೇ ಅವಮಾನ ಮಾಡಿಕೊಂಡಂತೆ. ರಾಜಕಾರಣ ಬಿಟ್ಟು ಅಭಿವೃದ್ಧಿ ವಿಚಾರ ಕೇಳಿ. ಸಂತೋಷದಿಂದ ಮಾಡುತ್ತೇನೆ. ಗೊಂದಲ ಮಾಡಿಕೊಂಡು ಸರಿಮಾಡಿ ಎಂದು ನನ್ನ ಮುಂದೆ ಬರಬೇಡಿ. ಗೊಂದಲ ಸರಿಪಡಿಸಲು ಇದು ಪಂಚಾಯ್ತಿ ಅಲ್ಲ ಎಂದು ಖಡಕ್ಕಾಗಿ ಹೇಳಿದರು.ಸುಮಲತಾ ಭಾಷಣ ಮುಗಿಸಿ ವೇದಿಕೆಯಿಂದ ಇಳಿಯುತ್ತಿದ್ದಂತೆ ತಮಗೂ ಮಾತನಾಡಲು ಅವಕಾಶ ನೀಡುವಂತೆ ವಿರೋಧಿ ಗುಂಪು ಕೇಳಿದಾಗ, ಯಾವುದೇ ಮಾತುಗಳಿಗೆ ಕಿವಿಗೊಡದ ಸುಮಲತಾ ವೇದಿಕೆಯಿಂದ ಇಳಿದು ಕಾರು ಹತ್ತಿದರು.
ರಾಜ್ಯದಲ್ಲಿ ಸಂಸದೆ ಸುಮಲತಾ ಎನ್ನುವವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂಬ ಸಂಸದೆ ಸುಮಲತಾ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಸಂಸತ್ ಚುನಾವಣೆಯಲ್ಲಿ ಯಾರು ಒಪ್ಪಂದ ಮಾಡಿಕೊಂಡಿರುವದು ಎಂದು ಎಲ್ಲರಿಗೂ ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.
ಇಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅವರು ಕಾಂಗ್ರೆಸ್ ಸೇರಲು ಮಾಡಿದ್ದ ಎಲ್ಲ ಪ್ರಯತ್ನಗಳನ್ನು ಬಿಚ್ಚಿಟ್ಟಿದ್ದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಡ್ಡಿಪಡಿಸಿದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಜೊತೆಗೆ ತಾವು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದ ವೇಲೆ ಜೆಡಿಎಸ್ ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ಹೇಳಿದ್ದರು. ಈ ಬಗ್ಗೆ ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲನ್ನು ಇನ್ನೂ ಮರೆತಂತಿಲ್ಲ. ಹೀಗಾಗಿ, ಸಂಸದೆ ಸುಮಲತಾ ಯಾರೆಂಬುದೇ ಗೊತ್ತಿಲ್ಲ. ಯಾರು ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಿಡಿಕಾರಿದರು.