ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ಇದರ ಮಧ್ಯೆ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ರಾಜಕೀಯ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ರಾಜಕಾರಣದಲ್ಲಿ ಇರಲು ಸುಮಕತಾ ಅಂಬರೀಶ್ ಬಯಸಿದ್ದು, ಇದಕ್ಕಾಗಿ ಯಾವುದಾದರೂ ಒಂದು ರಾಷ್ಟ್ರೀಯ ಪಕ್ಷ ಸೇರಲು ಚಿಂತನೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಸುಮಲತಾ ಎರಡ್ಮೂರು ಸುತ್ತಿನ ಮಾತುಕತೆ ನಡೆಸಿದ್ದು, ಇದೀಗ ಆಪ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ತಾರಾ..? ಈ ಚುನಾವಣೆಯಲ್ಲೇ ಬಿಜೆಪಿಯಿಂದ ವಿಧಾನಸಭಾ ಅಖಾಡಕ್ಕೆ ಧುಮುಕುತ್ತಾರಾ..? ಹೀಗೆ ನಾನಾ ಪ್ರಶ್ನೆಗಳು ಮಂಡ್ಯ ರಾಜಕೀಯದಲ್ಲಿ ಹರಿದಾಡುತ್ತಿವೆ. ಮಂಡ್ಯದಲ್ಲಿ ತಮ್ಮ ಆಪ್ತರು ಹಾಗೂ ಬೆಂಬಲಿಗರೊಂದಿಗೆ ಹಲವು ಸುತ್ತಿನ ಸಭೆ ನಡೆಸಿರುವ ಸುಮಲತಾ ಅವರು ನಿನ್ನೆ(ಶನಿವಾರ) ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಭೆ ನಡೆಸಿ ಅಭಿಪ್ರಾಯ ಆಲಿಸಿದರು. ಕಾಂಗ್ರೆಸ್ ಅಥವಾ ಬಿಜೆಪಿ ಪೈಕಿ ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂಬುದರ ಬಗ್ಗೆ ಬಹುತೇಕ ಮುಂದಿನ ವಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಬಿಜೆಪಿಯತ್ತ ಸುಮಲತಾ ಒಲವು?
ಹೌದು…ಸುಮತಾ ಅಂಬರೀಶ್ ಅವರ ಚಿತ್ತ ಹೆಚ್ಚಾಗಿ ಬಿಜೆಪಿಯತ್ತ ನೆಟ್ಟಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸುಮಲತಾರ ನಿಗೂಢ ಹೆಜ್ಜೆಗಳು ಕುತೂಹಲ ಕೆರಳಿಸಿವೆ. ಪ್ರಹ್ಲಾದ್ ಜೋಶಿ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಸುಮಲತಾ, ಮೋದಿ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದರು. ಮೋದಿಯನ್ನ ಹಾಡಿ ಹೊಗಳಿದ್ರು. ಇನ್ನೊಂದೆಜ್ಜೆ ಮುಂದೆ ಹೋಗಿ ಇವತ್ತು ಬಿಜೆಪಿ ಹಿರಿಯ ಮುಖಂಡ ಎಸ್.ಎಂ ಕೃಷ್ಣರನ್ನ ಭೇಟಿ ಮಾಡಿ ರಾಜಕೀಯ ನಡೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಆದ್ರೆ, ಇನ್ನೂ ಬಿಜೆಪಿಗೆ ಸೇರುವ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಸುಮಲತಾ, ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ. ಆಪ್ತರು, ಕಾರ್ಯಕರ್ತರು, ಕುಟುಂಬದವರು, ಹಿರಿಯರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ ರಾಜ್ಯ ರಾಜಕಾರಣಕ್ಕೆ ಸುಮಲತಾ ಪ್ರವೇಶ ಬಹುತೇಕ ಫಿಕ್ಸ್ ಆದಂತಿದೆ. ಅಲ್ಲದೇ, ಬಿಜೆಪಿಯಿಂದಲೇ ಸ್ಪರ್ಧೆ ಮಾಡುವುದು ಪಕ್ಕಾ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ, ಮಂಡ್ಯದಿಂದ ಕಣಕ್ಕಿಳಿತಾರಾ, ಮದ್ದೂರಿನಿಂದ ಸ್ಪರ್ಧಿಸುತ್ತಾರಾ? ಎನ್ನುವುದು ಇನ್ನೂ ನಿಗೂಢ. ಒಂದು ವೇಳೆ ಸುಮಲತಾ ವಿಧಾನಸಭೆಗೆ ಮಂಡ್ಯದಿಂದ ಸ್ಪರ್ಧಿಸಿದರೆ, ಎದುರಾಳಿಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಯಾರು ಕಣಕ್ಕಿಳಿತಾರೆ ಎನ್ನುವುದು ಈ ಕ್ಷಣಕ್ಕೂ ಮಂಡ್ಯ ಕಣ ಕುತೂಹಲವಾಗಿಯೇ ಉಳಿದಿದೆ.