ಕೂಗು ನಿಮ್ಮದು ಧ್ವನಿ ನಮ್ಮದು

ಅಮೃತಾ ಅಯ್ಯಂಗಾರ್ ವಿಚಾರದಲ್ಲಿ ನೀನು ಮಾಡಿದ್ದು ತಪ್ಪು’; ವೇದಿಕೆ ಮೇಲೆ ಧನಂಜಯ್ಗೆ ತಿಳಿ ಹೇಳಿದ ಕಿಚ್ಚ

ಕಿಚ್ಚ ಸುದೀಪ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಅನೇಕ ಕಾರ್ಯಕ್ರಮಗಳಿಗೆ ತೆರಳಿ ತಮ್ಮ ಬೆಂಬಲ ಸೂಚಿಸುತ್ತಾರೆ. ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮಾರ್ಚ್ 20ರಂದು ನಡೆಯಿತು. ಇದಕ್ಕೆ ಸುದೀಪ್ ಅವರು ಅತಿಥಿ ಆಗಿ ಆಗಮಿಸಿದ್ದರು. ಇಡೀ ತಂಡಕ್ಕೆ ಅವರು ಶುಭಕೋರಿದರು. ಸುದೀಪ್ ಬೆಂಬಲ ಕಂಡು ಇಡೀ ತಂಡ ಸಂತಸ ವ್ಯಕ್ತಪಡಿಸಿತು. ವೇದಿಕೆ ಏರಿದ ಸುದೀಪ್ ಅವರು ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಅವರ ಕಾಲೆಳೆದರು. ಇದು ಸಖತ್ ಫನ್ನಿ ಆಗಿತ್ತು.

ಧನಂಜಯ್ ಹಾಗೂ ಅಮೃತಾ ಅವರು ‘ಪಾಪ್ಕಾರ್ನ್ ಮಂಕಿ ಟೈಗರ್’, ‘ಬಡವ ರಾಸ್ಕಲ್’ ಹಾಗೂ ‘ಹೊಯ್ಸಳ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಮಧ್ಯೆ ಒಳ್ಳೆಯ ಆಪ್ತತೆ ಬೆಳೆದಿದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವ ಮಾತಿದೆ. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಅವರ ಮಧ್ಯೆ ಪ್ರೀತಿ ಇದೆಯೋ ಇಲ್ಲವೋ ಒಳ್ಳೆಯ ಫ್ರೆಂಡ್ಶಿಪ್ ಅಂತೂ ಇದೆ. ಸುದೀಪ್ ವೇದಿಕೆ ಏರಿದಾಗ ಇವರ ವಿಚಾರವನ್ನು ಇಟ್ಟುಕೊಂಡು ಎಲ್ಲರನ್ನೂ ನಗಿಸಿದರು.

ಮೊದಲು ವೇದಿಕೆ ಏರಿದ ಅಮೃತಾ ಅಯ್ಯಂಗಾರ್ ಅವರು ಡಾಲಿಯನ್ನು ನಾಲ್ಕೈದು ಬಾರಿ ಹೊಗಳಿದರು. ಅವರು ಸುಂದರವಾಗಿ ಕಾಣ್ತಿದಾರೆ ಎಂದು ಮೆಚ್ಚುಗೆ ಸೂಚಿಸಿದರು. ನಂತರ ಸುದೀಪ್ ಜೊತೆ ವೇದಿಕೆ ಏರಿದ ಧನಂಜಯ್ ಅವರು ಒಂದೇ ಬಾರಿ ಅಮೃತಾ ಹೆಸರನ್ನು ಹೇಳಿದರು. ಇದನ್ನು ಸುದೀಪ್ ನೆನಪಿಟ್ಟುಕೊಂಡಿದ್ದರು. ಧನಂಜಯ್ ಈ ರೀತಿ ಒಂದೇ ಮಾತಲ್ಲಿ ಅಮೃತಾ ಅವರ ಬಗ್ಗೆ ಹೇಳಿದ್ದು ನ್ಯಾಯ ಅಲ್ಲ ಎಂದರು ಕಿಚ್ಚ.

ಆಗ ಧನಂಜಯ್ ಅಮೃತಾ ಅವರನ್ನು ಹೊಗಳಲು ಮುಂದಾದರು. ‘ಮೂರು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ವಿ. ಎಲ್ಲಾ ಸಿನಿಮಾಗಳಲ್ಲೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ’ ಎಂದು ಧನಂಜಯ್ ಹೇಳುತ್ತಿದ್ದಂತೆ ಸುದೀಪ್ ಅವರು ಮತ್ತೆ ಕಾಲೆಳೆಯಲು ಮುಂದಾದರು. ‘ಹೌದು ನೀವ್ಯಾಕೆ ಇವರೊಟ್ಟಿಗೆ ಕೆಲಸ ಮಾಡ್ತೀರಾ? ಬೇರೆ ಕಲಾವಿದರಿಗೆ ಡೇಟ್ಸ್ ಕೊಡಿ. ಅವರ ಜೊತೆಯೂ ಕೆಲಸ ಮಾಡಿ. ಇವರೊಟ್ಟಿಗೆ ಸಿನಿಮಾ ಮಾಡ್ತಾ ಇದ್ರೆ ಬೇರೆ ಹೀರೋಗಳಿಗೆ ನೀವು ಹೇಗೆ ಸಿಗ್ತೀರಾ? ಇಷ್ಟೆಲ್ಲ ಮಾಡಿದ್ರೂ ನಿಮ್ಮನ್ನು ಹೊಗಳುತ್ತಿಲ್ಲ’ ಎಂದು ಅಮೃತಾಗೆ ಸುದೀಪ್ ಹೇಳಿದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು. ಕೊನೆಯಲ್ಲಿ ಇವರ ಕೆಮಿಸ್ಟ್ರಿ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದರು.

error: Content is protected !!