ಧಾರವಾಡ: ಮನೆಯ ಸುತ್ತ ಕಳೆದ ಹಲವಾರು ದಿನಗಳಿಂದ ನಾಗರ ಹಾವನ್ನು ಗಮನಿಸಿ ಉರಗ ತಜ್ಞರನ್ನು ಕರೆಸಿ ಹಾವು ಹಿಡಿಯಲು ಮುಂದಾದವರು ಬೆಚ್ಚಿಬಿದ್ದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಿಮನಿ ಎಂಬುವವರ ಮನೆಯ ಹಿತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ನಾಗರ ಹಾವೊಂದು ಓಡಾಟ ನಡೆಸಿತ್ತು. ಹಾವಿನ ನಡೆ ಗಮನಿಸಿದ ಕುಟುಂಬಸ್ಥರು ಉರಗ ತಜ್ಞರನ್ನು ಕರೆಸಿ ಹಾವು ಹಿಡಿಯಲು ಮುಂದಾಗಿದ್ದಾರೆ.
ಈ ವೇಳೆ ನಾಗರ ಹಾವು 25 ಮರಿಗಳೊಂದಿಗೆ ನೆಲದಡಿ ಅವಿತಿದ್ದನ್ನು ನೋಡಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶಾಕ್ ಆಗಿದ್ದಾರೆ. ತಾಯಿ ನಾಗರ ಹಾವನ್ನು ಉರಗ ತಜ್ಞ ಹಿಡಿಯುತ್ತಿದ್ದಂತೆ ಒಂದರ ಹಿಂದೆ ಒಂದರಂತೆ 25 ನಾಗರ ಹಾವಿನ ಮರಿಗಳು ನೆಲದ ಅಡಿಯಿಂದ ಹೊರ ಬಂದಿವೆ.
ಗ್ರಾಮಸ್ಥರು ಹಾವು ತನ್ನ ಮರಿಗಳೊಡನೆ ವಾಸವಾಗಿದ್ದನ್ನು ಕಂಡು ಅಚ್ಚರಿಗೆ ಒಳಪಟ್ಟಿದ್ದಲ್ಲದೆ, ತಮ್ಮ ತಮ್ಮ ಮೊಬೈಲ್ ಕ್ಯಾಮರಾ ಒಳಗೆ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸದ್ಯ ಹಾವು ಹಾಗೂ ಹಾವಿನ ಮರಿಗಳನ್ನು ಸೆರೆ ಹಿಡಿದು ಉರಗ ತಜ್ಞ ಹಾವುಗಳನ್ನು ಕಾಡಿಗೆ ಬಿಟ್ಟಿದ್ದಾರೆ. ಹಾವು ಪತ್ತೆಯಾಗುತಿದ್ದಂತೆ ಜನರು ಅವುಗಳನ್ನ ನೋಡಲು ನಾ ಮುಂದು ತಾ ಮುಂದು ಎಂದು ಆಗಮಿಸಿದರು. ಹಾವು ಪತ್ತೆಯಾದ ಬಳಿಕ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು.