ಕೂಗು ನಿಮ್ಮದು ಧ್ವನಿ ನಮ್ಮದು

ಸಾರ್ವಜನಿಕ ಸ್ಥಳದಲ್ಲಿ ಧಮ್ ಹೊಡೆದ್ರೆ ದಂಡ: ಕರ್ನಾಟಕದಲ್ಲಿ ಐದು ಲಕ್ಷ ಜನರಿಗೆ ಫೈನ್

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ದೇಶದಲ್ಲಿ 14.3 ಲಕ್ಷ ಜನರಿಗೆ ಕಳೆದ 3 ವರ್ಷಗಳಲ್ಲಿ ದಂಡ ವಿಧಿಸಲಾಗಿದೆ. ಇದರಲ್ಲಿ ರಾಜ್ಯದ ಐದು ಲಕ್ಷಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ, ಅಂಶದಲ್ಲಿ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ 2019ರ ಏಪ್ರಿಲ್‌ನಿಂದ 2022ರ ಮಾರ್ಚ್‌ವರೆಗೆ 5.07 ಲಕ್ಷ ಜನರಿಗೆ ದಂಡ ವಿಧಿಸಲಾಗಿದ್ದು, ಇದು ಭಾರತದಲ್ಲಿ ದಂಡ ವಿಧಿಸಲಾದ ಒಟ್ಟು 14.40 ಲಕ್ಷ ಜನರಲ್ಲಿ ಶೇ.35 ರಷ್ಟಾಗಿದೆ. ಒಟ್ಟು ದಂಡದ ಪೈಕಿ ಶೇ.50ರಷ್ಟು ಕರ್ನಾಟಕ ಮತ್ತು ಕೇರಳದಲ್ಲಿ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ 200 ರೂಪಾಯಿಗಳು ದಂಡ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸಬೇಕು ಎಂದು ಹಲವರು ಜನರು ಒತ್ತಾಯಿಸಿದ್ದಾರೆ.

ಆರೋಗ್ಯ ಸಚಿವಾಲಯದ ಅಂಕಿ, ಅಂಶಗಳ ಪ್ರಕಾರ ಕರ್ನಾಟಕ, ಕೇರಳ, ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ದಂಡ ವಿಧಿಸಲಾಗಿದೆ. 3 ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಈ 3 ರಾಜ್ಯಗಳು ಒಟ್ಟಾಗಿ ಶೇ. 65ಕ್ಕಿಂತ ಹೆಚ್ಚು ದಂಡ ಪಾವತಿಸಿವೆ.
ಬೆಲೆ ಹೆಚ್ಚಳದಿಂದ ಧೂಮಪಾನ ಕಡಿಮೆ ಮಾಡಲು ಸಾಧ್ಯವಿಲ್ಲ. ಒತ್ತಡ ನಿವಾರಣೆಗೆ ಹಲವರು ಧೂಮಪಾನವನ್ನೇ ಅವಲಂಬಿತರಾಗಿದ್ದಾರೆ. ಹೆಚ್ಚಿನ ಹಣ ನೀಡಿಯಾದರೂ ಧೂಮಪಾನ ಮಾಡುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವವರ ವಿರುದ್ಧ ದಂಡ ಹಾಕುವುದು ಆದಾಯದ ಮೂಲ ಎಂದು ಭಾವಿಸದೇ, ಧೂಮಪಾನ ನಿಯಂತ್ರಣಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಬೇಕಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು.

30 ಕೊಠಡಿಗಳನ್ನು ಹೊಂದಿರುವ ಹೋಟೆಲ್‌ ಅಥವಾ 30 ಜನರು ಅಥವಾ ಅದಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯ ಹೊಂದಿರುವ ರೆಸ್ಟೋರೆಂಟ್‌ ಮತ್ತು ವಿಮಾನ ನಿಲ್ದಾಣಗಳಲ್ಲಿ ಧೂಮಪಾನ ಪ್ರದೇಶಗಳಿಗೆ ಪ್ರತ್ಯೇಕ ನಿಬಂಧನೆ ಮಾಡಿದವರಿಗೆ ವಿನಾಯಿತಿ ನೀಡಬೇಕು. ಇದರಿಂದ ಧೂಮಪಾನವನ್ನು ಸಾರ್ವಜನಿಕ ಪ್ರದೇಶದಲ್ಲಿ ನಿಯಂತ್ರಿಸಬಹುದಾಗಿದೆ’ ಎನ್ನುತ್ತಾರೆ ತಜ್ಞರು. ಆರೋಗ್ಯದ ದೃಷ್ಟಿಯಿಂದ ಬಿಟ್ಟುಬಿಡಿ ಧೂಮಪಾನದ ಸಂಗ! ಅಂಗಡಿಗಳ ಸುತ್ತಲೂ ಜನರು ಧೂಮಪಾನ ಮಾಡುತ್ತಿದ್ದರೂ ಕಾನೂನು ಸರಿಯಾಗಿ ಜಾರಿ ಮಾಡುತ್ತಿಲ್ಲ. ಹಣ ವಸೂಲಿ ಮಾಡಿದರೂ ಅವರ ಆರೋಗ್ಯದ ಹಿತದೃಷ್ಟಿಯಿಂದ ಧೂಮಪಾನ ಮಾಡುವುದನ್ನು ತಡೆಯಲಾಗುತ್ತಿಲ್ಲ. ಅಂಗಡಿಯವರು ದಂಡ ಕಟ್ಟಿದರೆ ಕಂಪನಿಯವರು ಅಂಗಡಿಯವರಿಗೆ ದಂಡದ ಹಣ ಮರು ಪಾವತಿ ಮಾಡುತ್ತಾರೆ. ಹೀಗಿರುವಾಗ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ಎನ್ನುವುದು ಬಹಳ ಕಷ್ಟ’ ಎನ್ನುತ್ತಾರೆ ಗಿರಿನಗರ ನಿವಾಸಿ ಸುರೇಶ್‌.

error: Content is protected !!