ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆಗೆ ವರ್ಷವಿರುವಾಗಲೇ ಸೋಲನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿ ಸಿದ್ದರಾಮಯ್ಯನವರ ಕಾಲೆಳಿದಿದೆ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ಸೋತ ಭಯ, ಇವತ್ತು ವಿಪಕ್ಷ ನಾಯಕನಾಗಿರುವಾಗಲೂ ಕಾಡುತ್ತಿದೆ. ಚುನಾವಣೆಗೆ ವರ್ಷವಿರುವಾಗಲೇ ಸೋಲು ಒಪ್ಪಿಕೊಂಡು ಬಿಟ್ಟಿದ್ದಾರೆ.
ಸಿದ್ದರಾಮಯ್ಯನವರೇ, ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ? ಎಂದು ಟೀಕಿಸಿದೆ. ಬುಧವಾರ ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಅಗತ್ಯತೆ ಕುರಿತ ಚರ್ಚೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಇವಿಎಂ ಸಹ ಮ್ಯಾನ್ ಹ್ಯಾಂಡಲ್ ಯಂತ್ರವಾಗಿರುವುದರಿಂದ ಅದನ್ನೂ ಸಹ ತಿರುಚಬಹುದು ಅನ್ನಿಸುತ್ತದೆ. ಇವಿಎಂ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆಲ್ಲ ಚುನಾವಣಾ ಆಯೋಗ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದರು.
ನನ್ನ ಬಳಿಯೂ ಒಬ್ಬ ವ್ಯಕ್ತಿ ಬಂದು ತೋರಿಸಿದ. ಹಾಕಿದ 10 ವೋಟ್‍ಗಳಲ್ಲಿ ಎಳು ಬಿಜೆಪಿಗೆ, ಮೂರು ಕಾಂಗ್ರೆಸ್‍ಗೆ ಬಂತು ಈ ವಿಚಾರ ನನಗೂ ಆಶ್ಚರ್ಯವಾಯಿತು. ಆದ್ರೆ ನಾನು ತಜ್ಞನಲ್ಲ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಇವಿಎಂ ಮ್ಯಾನ್ ಹ್ಯಾಂಡಲ್ ಯಂತ್ರವಾಗಿರುವುದರಿಂದ ಅದನ್ನೂ ಸಹ ತಿರುಚಬಹುದು ಅನ್ನಿಸುತ್ತದೆ ಎಂದು ಹೇಳಿದ್ರು.