ಮೈಸೂರು: ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ ಬಸವರಾಜ್ ಎಂಬವರು ಇಲ್ಲಿನ ಇಂದಿರಾ ಕ್ಯಾಂಟೀನ್ನಲ್ಲಿ ಶುಕ್ರವಾರ ಹೋಳಿಗೆ ಸಹಿತ ಊಟ ಹಂಚಿದರು. ತಮ್ಮ ನೆಚ್ಚಿನ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿರುವುದರ ಸಂಭ್ರಮ ಆಚರಿಸಲು ಅವರು ಮೈಸೂರಿನ 11 ಇಂದಿರಾಗಾಂಧಿ ಕ್ಯಾಂಟೀನ್ಗಳಲ್ಲಿ ಇದೇ ರೀತಿ ಶನಿವಾರವೂ ಹೋಳಿಗೆ ಊಟ ನೀಡಲು ಯೋಜಿಸಿದ್ದಾರೆ.
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಬಸವರಾಜ್ ಅವರು ನಂಜುಮಳಿಗೆ ವೃತ್ತದಲ್ಲಿ ಸಿಹಿ ಹಂಚಿದ್ದರು.
ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ನ ಉಪಾಧ್ಯಕ್ಷ ಡಿ ಬಸವರಾಜ್ 1987 ರಿಂದ ಸಿದ್ದರಾಮಯ್ಯ ಅವರೊಂದಿಗೆ ಬಾಂಧವ್ಯ ಹೊಂದಿದ್ದಾರೆ. ಶುಕ್ರವಾರ ಇಂದಿರಾ ಕ್ಯಾಂಟೀನ್ನಲ್ಲಿ 150 ಸದಸ್ಯರಿಗೆ ಹೋಳಿಗೆ ವಿತರಿಸಲಾಗಿದೆ. ಶನಿವಾರ ಸಿದ್ದರಾಮಯ್ಯನವರ ಅನ್ನ ಭಾಗ್ಯ ಯೋಜನೆಗೆ ಗೌರವಾರ್ಥ ಹೋಳಿಗೆ ವಿತರಿಸಲು ಮುಂದಾಗಿದ್ದಾರೆ. ‘ಕ್ಷೀರ ಭಾಗ್ಯ’ ಯೋಜನೆಯನ್ನು ಗುರುತಿಸಲು ಅವರು ಬಾದಾಮ್ ಹಾಲು ವಿತರಿಸಲು ಯೋಜಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಕರ್ನಾಟಕದ ನೂತನ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭ ಶನಿವಾರ ಮಧ್ಯಾಹ್ನ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.