ಗದಗ: 2023 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಹಾಗೂ ರೋಣ ಕ್ಷೇತದಲ್ಲಿ ಜಿ ಎಸ್ ಪಾಟೀಲ್ ಆಯ್ಕೆ ಆಗಬೇಕೆಂದು ತಿಮ್ಮಾಪೂರ ಗ್ರಾಮದ ಮಾರುತೇಶ್ವರನಿಗೆ ಯುವಕರು ಹರಕೆ ಹೊತ್ತಿದ್ದು, ಇದೀಗ ಎರಡು ಹರಕೆಗಳು ನಿಜವಾಗಿರುವ ಹಿನ್ನಲೆ ನಾಳೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹೌದು 2023 ಮಾರ್ಚ್ 25 ರಂದು ಯುಗಾದಿ ಹಬ್ಬದ ನಿಮಿತ್ತ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯಲ್ಲಿ 2023 ರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಎಸ್ ಪಾಟೀಲರು ಶಾಸಕರಾಗಬೇಕು ಎಂದು ಬಾಳೆ ಹಣ್ಣಿನ ಮೇಲೆ ಬರೆದು ಗ್ರಾಮದ ಯುವಕರಾದ ಸುರೇಶ ಆಲೂರು, ಕಿರಣ ಜೋಗಿನ ಮತ್ತು ಅವರ ತಂಡ ರಥದ ಕಳಶಕ್ಕೆ ಎಸೆಯುವ ಮೂಲಕ ತಿಮ್ಮಾಪೂರ ಗ್ರಾಮದ ಯುವಕರು ವಿಶಿಷ್ಟವಾದ ಹರಕೆ ಹೊತ್ತಿದ್ದರು.
ಹರಕೆ ಈಡೇರಿಸಿದ ಮಾರುತೇಶ್ವರ
ರಥದ ಕಳಶಕ್ಕೆ ಈ ರೀತಿ ಹಣ್ಣು ಎಸೆದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಾಗಿದ್ದು, ಇಂದು ಸತ್ಯವಾಗಿದೆ. ಹರಕೆಯಂತೆ ಈಗ ಸಿದ್ದರಾಮಯ್ಯ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಜೊತೆಗೆ ರೋಣ ಶಾಸಕರಾಗಿ ಜಿ ಎಸ್ ಪಾಟೀಲ್ ಆಯ್ಕೆಯಾಗಿದ್ದಾರೆ. ಎತ್ತಿನ ಮೇಲೂ ನಡೆದಿದ್ದ ಸಿಎಂ ವಿಚಾರ ಸತ್ಯ
ಕಳೆದ ವರ್ಷ ನಡೆದ ಕಾರ ಹುಣ್ಣಿಮೆಗೆ ಎತ್ತುಗಳನ್ನು ಸಿಂಗರಿಸಿ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆದು ಎತ್ತುಗಳನ್ನು ಕರಿ ಹರಿವಲ್ಲಿ ಬಿಟ್ಟಾಗ ಸಿದ್ದರಾಮಯ್ಯನವರ ಹೆಸರಿನ ಎತ್ತು ಮುಂದೆ ಬಂದು ಶುಭ ಸೂಚಕವನ್ನು ಸೂಚಿಸಿದ್ದು ಈಗ ಸತ್ಯವಾಗಿದೆ. 2023 ರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಮಂತ್ರಿಯಾಗಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಆಯ್ಕೆಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗೂ ರೋಣ ವಿಧಾನ ಸಭಾ ಕ್ಷೇತ್ರಕ್ಕೆ ಜಿ ಎಸ್ ಪಾಟೀಲರು 24688 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ದೇವರಲ್ಲಿಟ್ಟ ನಂಬಿಕೆ ಸತ್ಯವಾಗಿದೆ ಎಂದು ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಅಭಿಪ್ರಾಯ ಪಟ್ಟಿದ್ದಾರೆ.
ನಾಳೆ ತಿಮ್ಮಾಪೂರದಲ್ಲಿ ಸಂಭ್ರಮ
ನಾಳೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅಂಗವಾಗಿ ಶ್ರೀ ಮಾರುತೇಶ್ವರನಿಗೆ ವಿಶೇಷ ಪೂಜೆ ನಡೆಯುತ್ತವೆ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ದರಾಮಯ್ಯನವರ ಬ್ಯಾನರ್ ಕಟೌಟಗಳನ್ನು ಕಟ್ಟಿ ಗ್ರಾಮವನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಎತ್ತಿನ ಮೆರವಣಿಗೆ ಮಾಡುವ ಮೂಲಕ ಅನ್ನ ಸಂತರ್ಪಣೆ ಮಾಡಲಾಗುವುದು ಎಂದು ಗ್ರಾಮದ ಮುಖಂಡರು, ಅಭಿಮಾನಿಗಳು ತಿಳಿಸಿದ್ದಾರೆ.