ಕೂಗು ನಿಮ್ಮದು ಧ್ವನಿ ನಮ್ಮದು

ರಾಜಕೀಯ ಒತ್ತಡಗಳ ನಡುವೆ ಆರ್ಸಿಬಿ ಮ್ಯಾಚ್ ವೀಕ್ಷಿಸಿದ ಸಿದ್ದರಾಮಯ್ಯ: ಫೋಟೋ ವೈರಲ್

ಬೆಂಗಳೂರು: ರಾಜಕೀಯ ಜಂಜಾಟಗಳ ಮಧ್ಯೆ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೊಬ್ಬ ಅಪ್ಪಟ ಕ್ರಿಕೆಟ್ ಅಭಿಮಾನಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಮುಖ್ಯಮಂತ್ರಿ ಆಯ್ಕೆ ಹಗ್ಗಜಗ್ಗಾಟ ಮುಗಿದರೂ ಸಹ ಸಚಿವ ಸಂಪುಟ ರಚನೆ ಸೇರಿದಂತೆ ಹಲವು ರಾಜಕೀಯ ಒತ್ತಡಗಳ ಮಧ್ಯೆ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ. ಹೌದು. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆಗಿದ್ದು, ಡಿಕೆಶಿ ಡಿಸಿಎಂ ಆಗಿದ್ದಾರೆ. ಈ ಬೆನ್ನಲ್ಲೇ ಇದೀಗ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಕೂಡ ಶುರುವಾಗಿದೆ. ಆದರೆ ಈ ಎಲ್ಲಾ ರಾಜಕೀಯ ಟೆನ್ಷನ್ಗಳ ನಡುವೆ ಸಿದ್ದರಾಮಯ್ಯ ಅವರು ಆರ್ಸಿಬಿ ಮ್ಯಾಚ್ ವೀಕ್ಷಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜಕೀಯ ಒತ್ತಡದ ನಡುವೆಯೂ ಗುರುವಾರ ರಾತ್ರಿ ರಿಲ್ಯಾಕ್ಸ್ ಆಗಲು ಸಿದ್ದರಾಮಯ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಕೊನೆಯ ಓವರ್ ನೋಡಿದ್ದಾರೆ. ಸಿಎಲ್‍ಪಿ ಸಭೆ ಮುಗಿಸಿ ನಿವಾಸಕ್ಕೆ ಹೋದ ಬಳಿಕ ಬೆಂಬಲಿಗರ ಜೊತೆ ಕೆಲಕಾಲ ಐಪಿಎಲ್ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಇದರೊಂದಿಗೆ ರಾಜಕೀಯ ಒತ್ತಡಗಳು ಇದ್ದರೂ ಸಹ ಸಿದ್ದರಾಮಯ್ಯ ಅವರು ಆರ್ಸಿಬಿ ಮ್ಯಾಚ್ ನೋಡಿ ರಿಲ್ಯಾಕ್ಸ್ ಆಗಿದ್ದಾರೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿ ತಂಡವನ್ನು ಗೆಲ್ಲಿಸಿದ್ದಾರೆ. ಅಲ್ಲದೇ ತಂಡವನ್ನು ನಾಕೌಟ್ ಸುತ್ತಿಗೆ ಅರ್ಹತೆ ಪಡೆಯುವ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ.

ಸಿದ್ದರಾಮಯ್ಯ ಅವರು ಈ ಹಿಂದೆಯೂ ಹಲವು ಬಾರಿ ಸ್ಟೇಡಿಯಂ ಹೋಗಿ ಮ್ಯಾಚ್ ವೀಕ್ಷಣೆ ಮಾಡಿದ್ದರು. ಇತ್ತೀಚೆಗೆಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಸಿದ್ದರಾಮಯ್ಯ ಅವರು ತಮ್ಮ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪಂದ್ಯ ವೀಕ್ಷಿಸಿ ಎಂಜಾಯ್ ಮಾಡಿದ್ದರು.

ಇನ್ನು ಸಿದ್ದರಾಮಯ್ಯ ಅವರು ನಾಳೆ(ಮೇ20) ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

error: Content is protected !!