ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ಗೆ ಗೆಲುವು, ಸಿಎಂ ಕುರ್ಚಿಗಾಗಿ ಪಕ್ಷದಲ್ಲಿ ಬಣ ರಾಜಕೀಯ ಶುರು

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ದೊರೆತಿದೆ. ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯುತ್ತಿದಂತೆ ಒಳ ಒಳಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನಕ್ಕೆ ಲಾಭಿ ಶುರುವಾಗಿದೆ. ಮುಖ್ಯಮಂತ್ರಿ ಗಾದಿಗಾಗಿ ಮೊದ ಮೊದಲಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಹೆಸರು ಮುನ್ನೆಲೆಗೆ ಬರುತ್ತಿದ್ದವು. ಆದರೆ ಈಗ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಬಹುಮತ ಸಿಕ್ಕ ನಂತರ ಹೆಸರುಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಒಬ್ಬರು ಸಿಎಂ 3 ಜನ ಡಿಸಿಎಂ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕರು ಇಂದು (ಮೇ.14) ಸಾಯಂಕಾಲ ಶಾಸಕಾಂಗ ಸಭೆ ಕರೆದಿದ್ದು, ಸಭೆ ಬಳಿಕ ಭಾಗಶಃ ತೀರ್ಮಾನವಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಸಮುದಾಯದ ನಾಯಕರು ಸಭೆ ನಡೆಸಿದ್ದಾರೆ.

ಇಂದು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಬಣದ ಶಾಸಕರೊಂದಿಗೆ ಪ್ರತ್ಯೇಕ ಮೀಟಿಂಗ್ ನಡೆಸಿದ್ದರು. ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಪ್ರತ್ಯೇಕ ಮೀಟಿಂಗ್ ನಡೆಸಿದ್ದು, ಶಾಸಕ ಭೈರತಿ ಸುರೇಶ್, ಎಂಬಿ ಪಾಟೀಲ್, ಝಮೀರ್ ಅಹಮದ್ ಖಾನ್ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರ ವಿಶ್ವಾಸಗಳಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ತಿಳಿದಿರುವುಂತೆ ಸಿಎಂ ಕುರ್ಚಿಯಲ್ಲಿ ಕೂಡಲು ಡಿ.ಕೆ.ಶಿವಕುಮಾರ್ ಅವರು ಕೂಡ ಹವಣಿಸುತ್ತಿದ್ದಾರೆ. ಒಕ್ಕಲಿಗನನ್ನು ಸಿಎಂ ಮಾಡಲು ಒಕ್ಕಲಿಗ ನಾಯಕರು ಮತ್ತು ಶ್ರೀಗಳು ಒಂದಾಗಿದ್ದಾರೆ. ಡಿ.ಕೆ.ಶಿವಕುಮಾರ್ ಪರವಾಗಿ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಮಧ್ಯಾಹ್ನ 3 ಗಂಟೆಗೆ ಒಕ್ಕಲಿಗರ ಶ್ರೀಗಳು ಸಭೆ ನಡೆಸುವ ಸಾಧ್ಯತೆ ಇದೆ.

ಸಿಎಂ ಕುರ್ಚಿ ಮೇಲೆ ದಲಿತ ಸಮುದಾಯದ ನಾಯಕರು ಕೂಡ ಕಣ್ಣಿಟ್ಟಿದ್ದಾರೆ. ಈ ಕುರ್ಚಿ ಮೇಲೆ ಡಾ. ಜಿ ಪರಮೇಶ್ವರ ಅವರನ್ನು ಕೂಡಿಸಲು ಪರಮೇಶ್ವರ್​ ಮನೆಯಲ್ಲಿ ದಲಿತ ನಾಯಕರ ಸಭೆ ನಡೆದಿದೆ. 2013ರಲ್ಲಿ ದಲಿತರಿಗೆ ಸಿಎಂ ಆಗುವ ಅವಕಾಶ ಕೈತಪ್ಪಿತ್ತು. ಈ ಹಿನ್ನೆಲೆ ದಲಿತ ಸಿಎಂ ಆಗಬೇಕೆಂದು ವೇಣುಗೋಪಾಲ್, ಬಿ.ಎಲ್.ಶಂಕರ್, ಎಲ್.ಹನುಮಂತಯ್ಯ, ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ಹಲವರು ಸಭೆ ನಡೆಸಿದ್ದಾರೆ.

error: Content is protected !!