ಕೂಗು ನಿಮ್ಮದು ಧ್ವನಿ ನಮ್ಮದು

ವರುಣಾ ಚುನಾವಣಾ ಅಖಾಡಕ್ಕಿಳಿದ ಬಿವೈ ವಿಜಯೇಂದ್ರ, ಬಿಎಲ್ ಸಂತೋಷ್: ವರುಣಾದತ್ತ ದೌಡಾಯಿಸಲಿದ್ದಾರೆ ಸಿದ್ದರಾಮಯ್ಯ

ಮೈಸೂರು: ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಚರ್ಚೆಗೆ ಬರುತ್ತಿರುವುದು ವರುಣಾ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ವಿಚಾರ. ವರುಣಾದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಿರೀಕ್ಷೆಯಂತೆ ವಿ ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿದೆ. ವಿ ಸೋಮಣ್ಣ ಅವರನ್ನು ಕಣಕ್ಕೆ ಇಳಿಸಲು ಕಾರಣವೂ ಇದೆ. ವಿ ಸೋಮಣ್ಣ ಅವರು ಲಿಂಗಾಯತ ನಾಯಕರಾಗಿದ್ದು, ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಿವೆ. ಹಾಗೇ ಸೋಮಣ್ಣ ಅವರು ಹಿಂದೊಮ್ಮೆ ಮೈಸೂರು ಜಿಲ್ಲಾ ಉಸ್ತುವಾರಿಯಾಗಿದ್ದರು. ಇದು ಕೂಡ ವರ್ಕೌಂಟ್ ಆಗಲಿದೆ ಎಂಬುವುದು ಬಿಜೆಪಿಯ ಲೆಕ್ಕಾಚಾರ. ಈಗ ಸೋಮಣ್ಣ ವರುಣಾದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದು, ಇವರ ಜೊತೆ ಬಿಎಸ್ ಯಡಿಯೂರಪ್ಪ ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ಫೀಲ್ಡ್ಗೆ ಇಳಿದಿದ್ದಾರೆ. ಇದರಿಂದ ಅಲರ್ಟ್ ಆದ ಸಿದ್ದರಾಮಯ್ಯ ಅವರು ನಾಳೆ ತವರು ಕ್ಷೇತ್ರಕ್ಕೆ ತೆರಳಿ ಮತಯಾಚನೆ ಮಾಡಲಿದ್ದಾರೆ.

ನಾಮಪತ್ರ ಸಲ್ಲಿಸಿದ ಎರಡೇ ದಿನಕ್ಕೆ ಮತ್ತೆ ಮೈಸೂರಿಗೆ ಹೊರಟಿರುವ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ 10.30ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ನಂತರ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಪ್ರಚಾರ ಮಾಡಲಿದ್ದಾರೆ.

ಇನ್ನು ವರುಣಾದಲ್ಲಿ ಬಿವೈ ವಿಜಯೇಂದ್ರ ಮಾತ್ರವಲ್ಲದೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಕೂಡಾ ಮೈಸೂರು ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಂಸದ ಪ್ರತಾಪ್ ಸಿಂಹ ಒಳಗೊಂಡ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಈ ವೇಳೆ ವರುಣಾ ಕ್ಷೇತ್ರದ ಬಗ್ಗೆ ಕಾರ್ಯಕರ್ತರಿಂದ ಮಾಹಿತಿ ಪಡೆದಿದ್ದಾರೆ. ಇನ್ನು ಬಿಎಲ್ ಸಂತೋಷ ಮೈಸೂರಿನಲ್ಲಿ ಆಕ್ಟಿವ್ ಆಗುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ತಲೆಬಿಸಿ ಶುರುವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರುಣಾ ಕ್ಷೇತ್ರದ ಪ್ರಚಾರದ ನಿರ್ವಹಣೆ ಮತ್ತು ಕಾರ್ಯಕರ್ತರೊಂದಿಗೆ ನಿಕಟವಾಗಿ ಕೆಲಸ ಮಾಡಲು ಕೇಂದ್ರ ವೀಕ್ಷಕರಾಗಿ ತಮ್ಮ ಆಪ್ತ ದಿಲೀಪ್ ಕುಮಾರ್ ಜೈಸ್ವಾಲ್ ಅವರನ್ನು ನಿಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದ ಬೇರೆ ಸ್ಥಳಗಳಲ್ಲಿ ಪ್ರಚಾರ ಮಾಡದಂತೆ ವರುಣಾ ಕ್ಷೇತ್ರದಲ್ಲಿ ಮಾತ್ರವೇ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಸಿದ್ದರಾಮಯ್ಯ ಅವರನ್ನು ಬ್ಯುಸಿಯಾಗಿರುವಂತೆ ಮಾಡಲು ಸೋಮಣ್ಣ ಮತ್ತು ಅವರ ತಂಡಕ್ಕೆ ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ

error: Content is protected !!