ಕೂಗು ನಿಮ್ಮದು ಧ್ವನಿ ನಮ್ಮದು

ವಿಪಕ್ಷ ನಾಯಕ ಸಿದ್ದರಾಮಯ್ಯ ವಿಡಿಯೋ ವೈರಲ್: ಇದು ನಕಲಿ, ಬಿಜೆಪಿಯವರು ತಿರುಚಿಸಿದ್ದಾರೆ ಎನ್ನುತ್ತಿರುವ ಸಿದ್ದರಾಮಯ್ಯ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಅವರು ಬಸ್ನಲ್ಲಿ ಕುಳಿತುಕೊಂಡು ಪ್ರತಿಯೊಬ್ಬರಿಗೂ 500 ರೂಪಾಯಿ ಕೊಟ್ಟು ಪ್ರಜಾಧ್ವನಿಯಾತ್ರೆಗೆ ಜನರನ್ನು ಕರೆತರುವಂತೆ ಹೇಳಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ತಾನು 500 ರೂಪಾಯಿ ಬಗ್ಗೆ ಮಾತನಾಡಿದ್ದು ನಿಜ. ಆದರೆ ಬಿಜೆಪಿಯವರು 500 ರೂಪಾಯಿ ಕೊಟ್ಟು ಜನರನ್ನು ಕರೆತರುತ್ತಿದ್ದಾರೆ ಅಂತ ಹೇಳಿದ್ದೆ. ಅವರು (ಬಿಜೆಪಿ) 1 ಸಾವಿರ ರೂಪಾಯಿ ಕೊಡುತ್ತೇನೆ ಅಂತ ಹೇಳಿ 500 ರೂಪಾಯಿ ಕೊಟ್ಟಿದ್ದಾರೆ ಅಂತ ಹೊಡೆದಾಡಿಕೊಂಡಿದ್ದರಲ್ವ, ಇದೇ ಕಾರಣಕ್ಕೆ ಹಾಗೆ ಹೇಳಿದ್ದೇ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ಸರಣಿ ಟ್ವೀಟ್ ಕೂಡ ಮಾಡಿದ್ದಾರೆ.

ಬಿಜೆಪಿಯವರು 500 ರೂಪಾಯಿ ಕೊಟ್ಟು ರ್ಯಾಲಿಗೆ ಜನ ಕರೆದುಕೊಂಡು ಬರುತ್ತಾರೆ ಎಂದು ನಾನು ಹೇಳಿದ್ದನ್ನು ಬಿಜೆಪಿಯವರು ತಿರುಚಿ, ಅವರು ಮಾಡಿರುವ ಪಾಪಕೃತ್ಯವನ್ನು ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಸುಳ್ಳು, ಮೋಸ ಮತ್ತು ದ್ರೋಹ ಬಿಜೆಪಿಯ ಡಿಎನ್‌ಎಯಲ್ಲಿದೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ನನ್ನ ಹೇಳಿಕೆಯ ವಿಡಿಯೋಗಳನ್ನು ತಿರುಚಿ ಈ ರೀತಿ ಅಪಪ್ರಚಾರ ಮಾಡುತ್ತಿರುವುದು ಇದು ಮೊದಲ ಬಾರಿ ಅಲ್ಲ, ಹಿಂದೆ ಕೆಲವು ಬಾರಿ ನಡೆದಿದೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನು ಹಲವು ಬಾರಿ ನಡೆಯಬಹುದು. ಇಂತಹ ಸುಳ್ಳುಗಳನ್ನು ಸೃಷ್ಟಿಸಲು ಬಿಜೆಪಿಯವರು ದೊಡ್ಡ ದೊಡ್ಡ ಫ್ಯಾಕ್ಟರಿಗಳನ್ನೇ ತೆಗೆದಿದ್ದಾರೆ” ಎಂದು ಸಿದ್ದರಾಮಯ್ಯ ಟ್ವಿಟರ್ನಲ್ಲಿ ಟೀಕಿಸಿದ್ದಾರೆ.

ಇಂತಹ ನಕಲಿ ವಿಡಿಯೋಗಳಿಗೆ ಬಲಿಬೀಳದೆ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ನಕಲಿ ವಿಡಿಯೋಗಳನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪುಂಡರನ್ನು ನಮ್ಮ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ಹುಡುಕಿ ಪೊಲೀಸರಿಗೆ ದೂರು ನೀಡಬೇಕು” ಎಂದು ಸಿದ್ದರಾಮಯ್ಯ ಹೇಳಿದರು.

ಈ ರೀತಿಯ ನಕಲಿ ವಿಡಿಯೋ-ಅಡಿಯೋ ಮೂಲಕ ಅಪಪ್ರಚಾರ ಮಾಡಿ ನನ್ನ ತೇಜೋವಧೆ ಮಾಡಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ. ನಲ್ವತ್ತು ವರ್ಷಗಳ ನನ್ನ ರಾಜಕಾರಣವನ್ನು ರಾಜ್ಯದ ಜನ ನೋಡಿದ್ದಾರೆ. ಸರಿ-ತಪ್ಪು, ಸತ್ಯ-ಸುಳ್ಳುಗಳನ್ನು ಅರ್ಥಮಾಡಿಕೊಳ್ಳುವಷ್ಟು ಅವರು ಪ್ರಜ್ಞಾವಂತರಿದ್ದಾರೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಣ, ಹೆಂಡ ಹಂಚಿ ಕಾರ್ಯಕ್ರಮಕ್ಕೆ ಜನ ಕರೆತಂದ ಕೂಡಲೆ ಅವೆಲ್ಲ ಮತಗಳಾಗುವುದಿಲ್ಲ, ಚುನಾವಣೆ ಗೆಲ್ಲಲೂ ಆಗಲ್ಲ. ಪ್ರೀತಿ-ವಿಶ್ವಾಸದಿಂದ ಬರುವ 10 ಜನ ಸೇರಿದರೂ ಆ ಹತ್ತೇ ಜನಕ್ಕೆ ಭಾಷಣ ಮಾಡುವವನು ನಾನು. ಇದು ನಾನು ರಾಜಕೀಯದಲ್ಲಿ ರೂಢಿಸಿಕೊಂಡು ಬಂದಿರುವ ಅಭ್ಯಾಸ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

error: Content is protected !!