ಕೂಗು ನಿಮ್ಮದು ಧ್ವನಿ ನಮ್ಮದು

ರೈತರ ಗೊಬ್ಬರಕ್ಕೆ ಐವತ್ತು ಸಾವಿರ ಕೋಟಿ ಸಬ್ಸಿಡಿ ಕಡಿತ: ನಿರಾಶಾದಾಯಕ ಬಜೆಟ್‌ ಎಂದ ಸಿದ್ದರಾಮಯ್ಯ

ಬೆಂಗಳೂರು: ದೇಶದ ಆರ್ಥಿಕ ಸಚಿವರು ಮಂಡಿಸಿರುವ ಬಜೆಟ್‌ನಲ್ಲಿ ರೈತರಿಗೆ, ಕೃಷಿ ಕಾರ್ಮಿಕರಿಗೆ ದ್ರೋಹ ಮಾಡಲಾಗಿದೆ. ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ 50 ಸಾವಿರ ಕೋಟಿ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಹೀಗಾದರೆ ರೈತರಿಗೆ ನ್ಯಾಯಯುತವಾಗಿ ಬೆಲೆ ಹೇಗೆ ಸಿಗುತ್ತದೆ. ಅತ್ಯಂತ ನಿರಾಶಾದಾಯಕ ಬಜೆಟ್‌ ಆಗಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಮಾಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡಿದ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ಇದು ಅತ್ಯಂತ ನಿರಾಶಾದಾಯಕ ಬಜೆಟ್‌ ಆಗಿದೆ. ಕೃಷಿಗೆ, ನೀರಾವರಿಗೆ, ಗ್ರಾಮೀಣಾಭಿವೃದ್ಧಿ, ಕೈಗಾರಿಗೆ, ಸಮಾಜ ಕಲ್ಯಾಣ ಹೆಚ್ಚು ಅನುದಾನ ಸಿಕ್ಕಿಲ್ಲ. ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ 50 ಸಾವಿರ ಕೋಟಿ ಸಬ್ಸಿಡಿ ಕಡಿಮೆ ಮಾಡಿದ್ದಾರೆ . ನರೇಗಾದಲ್ಲಿ 29 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ. ಇಲ್ಲಿ ರೈತರಿಗೆ ಕೆಲಸ ಎಲ್ಲಿ ಸಿಗುತ್ತದೆ. ರೈತರಿಗೆ, ಕೃಷಿ ಕಾರ್ಮಿಕರಿಗೆ ದ್ರೋಹ ಮಾಡಲಾಗಿದೆ. ಹೀಗಾದರೆ ರೈತರಿಗೆ ನ್ಯಾಯಯುತವಾಗಿ ಬೆಲೆ ಹೇಗೆ ಸಿಗುತ್ತದೆ. ಇದು ರೈತರಿಗೆ ಮಾಡಿದ ದ್ರೋಹ, ಮೋಸವಾಗಿದೆ ಎಂದಿದ್ದಾರೆ.

5,300 ಕೋಟಿ ತಮಟೆ ಹೊಡೆಯೋಕೆ ಕೊಟ್ಟಿದಾರೆ: ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹೊರತು ಪಡಿಸಿ ಕರ್ನಾಟಕಕ್ಕೆ ಏನೂ ಮಾಡಿಲ್ಲ. ಇದನ್ನು ತಮಟೆ ಹೊಡೆಯೋಕೆ ಎಲ್ಲರಿಗೂ ಹೇಳಿಕೊಂಡು ಓಡಾಡುವುದಕ್ಕೆ ಅನುದಾನ ಕೊಟ್ಟಿದ್ದಾರೆ. ಆದರೆ ನೋಟಿಫಿಕೇಷನ್ ಇಶ್ಯೂ ಆಗದೇ ಹೊರತು ಖರ್ಚು ಮಾಡಲು ಬರುವುದಿಲ್ಲ. ಮಹದಾಯಿಗೂ 1,000 ಕೋಟಿ ಇಟ್ಟಿದ್ದಾರೆ. ಹಿಂದೆ ನಮಗೆಲ್ಲಾ ಚಿಕ್ಕವರಿದ್ದಾಗ ಬಾಂಬೆ ಪೆಟ್ಟಿಗೆ ತೋರಿಸ್ತಿದ್ದರು. ಇದು ಅದೇ ತರ ಮಾಡ್ತಿದ್ದಾರೆ. ಇದು ಕನ್ನಡಿಯೊಳಗಿನ ಗಂಟು ಆಗಿದೆ. ಬೊಮ್ಮಾಯಿ, ಕಾರಜೋಳ ನ್ಯಾಷನಲ್ ಪ್ರಾಜೆಕ್ಟ್ ಮಾಡ್ತಿವಿ ಎಂದಿದ್ದರು. ಆದರೆ, ಅದು ಆಗಲಿಲ್ಲ ಎಂದರು.

ಜನರ ತೆರಿಗೆ ವಸೂಲಿ ಪ್ರಮಾಣ ಹೆಚ್ಚಳ: ದೇಶದಲ್ಲಿ 100 ರೂಪಾಯಿ ತೆರಿಗೆ ಸಂಗ್ರಹ ಆದರೆ ಕಾರ್ಪೋರೆಟ್ ಮತ್ತು ಇನ್ ಕಂ ಟ್ಯಾಕ್ಸ್ ನಿಂದ 30 ರೂಪಾಯಿ ಬರುತ್ತದೆ. ಜನ ಕಟ್ಟುವ ತೆರಿಗೆ 100 ರೂಪಾಯಿಯಲ್ಲಿ 34 ರೂಪಾಯಿ ಆಗುತ್ತಿದೆ. ಸಾಲದಿಂದ 34 ರೂಪಾಯಿ ಬರುತ್ತದೆ. ಇನ್ನು 2 ರೂಪಾಯಿ ತೆರಿಗೆಯೇತರ ಆದಾಯ ಬರತ್ತದೆ. ಇದರಲ್ಲಿ ಜನ ಕೊಡುವ ತೆರಿಗೆಯೇ ಹೆಚ್ಚಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ಜನ ಕೊಡುವ ತೆರಿಗೆ ಕಡಿಮೆ ಇತ್ತು. ಕಾರ್ಪೋರೆಟ್, ಇನ್ ಕಂ ಟ್ಯಾಕ್ಸ್ ಹೆಚ್ಚಿತ್ತು. ಆದರೆ ಈಗ ಉಲ್ಟಾ ಆಗಿದೆ. ಮನಮೋಹನ್ ಸಿಂಗ್ ‌ಕಾಲದಲ್ಲಿ ಕಾರ್ಪೊರೇಟ್, ಇನ್ ಕಂ ಟ್ಯಾಕ್ಸ್ 30% ಇದ್ದದ್ದನ್ನು ಈಗ 22% ಗೆ ಇಳಿಸಿದ್ದಾರೆ. ಇದರ ಅರ್ಥ ಈ ಸರ್ಕಾರ ಕಾರ್ಪೋರೆಟ್ ಗಳ ಪರ ಇದೆ. 2.5 ಲಕ್ಷದ ತನಕ ಟ್ಯಾಕ್ಸ್ ಫ್ರೀ ಇತ್ತು. ಅದನ್ನು ಈಗ 3 ಲಕ್ಷದವರೆಗೆ ಟ್ಯಾಕ್ಸ್ ಫ್ರೀ ಮಾಡಿದಾರೆ ಎಂದು ತಿಳಿಸಿದರು.

ಜನರ ಸಣ್ಣ ವಸ್ತುಗಳ ಮೇಲೂ ತೆರಿಗೆ ಹೊರೆ: ಬಿಜೆಪಿ ನಾಯಕರು ತೆರಿಗೆ ಹೆಚ್ಚಳ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನೇರ ತೆರಿಗೆಯನ್ನು ಹೆಚ್ಚಳ ಮಾಡಿಲ್ಲ. ಆದರೆ ಮೊಸರಿನ ಮೇಲೆ, ಮಜ್ಜಿಗೆ ಮೇಲೆ, ಬೆಣ್ಣೆ ಮೇಲೆ, ಪುಸ್ತಕ-ಪೆನ್ಸಿಲ್ ಮೇಲೆ 18% ತೆರಿಗೆ ಹಾಕಿದ್ದಾರಲ್ಲ? ನಾನು ತಿಳಿದಂತೆ ಕಳೆದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಅವಕ್ಕೆಲ್ಲ ತೆರಿಗೆ ಹಾಕಿದ್ದಾರಲ್ಲ? ಎರಡ್ಮೂರು ತಿಂಗಳು ಮೊದಲಿನಿಂದಲೇ ವಸೂಲಿ ಮಾಡುತ್ತಿದ್ದಾರೆ. ಬಜೆಟ್ ನಲ್ಲಿ ನೇರ ತೆರಿಗೆ ಹೆಚ್ಚು ಮಾಡಿಲ್ಲ ಅಷ್ಟೇ. ಹಿಂದೆ ಮೊಸರು, ಬೆಣ್ಣೆ, ಮಜ್ಜಿಗೆ, ಪುಸ್ತಕ, ಪೆನ್ಸಿಲ್ ಮೇಲೆ ತೆರಿಗೆಯೆ ಇರಲಿಲ್ಲ ಎಂದು ಹೇಳಿದರು.

error: Content is protected !!