ಹಾಸನ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಕಾಂಗ್ರೆಸ್ ಪ್ರಜಾಧ್ವನಿ ಎಂಬ ಹೆಸರಿನ ಮೂಲಕ ಬಸ್ ಯಾತ್ರೆ ಮಾಡುತ್ತಿದ್ದು, ಪ್ರಚಾರದ ಭರಾಟೆಯಲ್ಲಿ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ. ಇದರಂತೆ ಜೆಡಿಎಸ್ ಭದ್ರಕೋಟೆ, ದೊಡ್ಡಗೌಡರ ತವರು ಜಿಲ್ಲೆ ಹಾಸನದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಟ್ಟಿಮಾತನಂತೆ ಸೌಲಭ್ಯಗಳನ್ನು ನೀಡದಿದ್ದರೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
ಹಾಸನದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಮಾತನಾಡಿ 7 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳನ್ನಾದರೂ ಕಾಂಗ್ರೆಸ್ ಗೆಲ್ಲಲೇಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಉಚಿತವಾಗಿ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಈಗ ಬಿಜೆಪಿಯವರು ಕೇವಲ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ. ಕುಟುಂಬದ ಹಿರಿಯ ಮಹಿಳೆಗೆ ತಿಂಗಳಿಗೆ ₹ 2 ಸಾವಿರ ನೀಡುತ್ತೇವೆ. ಉಚಿತವಾಗಿ ತಿಂಗಳಿಗೆ 200 ಯೂನಿಟ್ ವಿದ್ಯುತ್ ಕೊಡುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಕೊಟ್ಟ ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು.