ಬೆಳಗಾವಿ: ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷರಾಗುವುದಕ್ಕೆ ಲಾಯಕ್ ಅಲ್ಲ ಕಟೀಲ್ ಪ್ರಭುದ್ಧ ರಾಜಕಾರಣಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಟೀಲ್ ರಾಜಕೀಯವಾಗಿ ನಮ್ಮ ವಿರೋಧಿಗಳು. ಅವರು ಹೇಳಿದ್ದು ಸತ್ಯ ಅಂತಾ ನಾವು ನಂಬಬೇಕಾ? ಕಟೀಲ್ ಆಧಾರ ರಹಿತ ಆರೋಪವನ್ನು ಮಾಡುತ್ತಿದ್ದಾರೆ. ಕಟೀಲ್ ಸುಳ್ಳು ಹೇಳುತ್ತಿದ್ದಾರೆ. ಅವರು ಬಿಜೆಪಿ ಅಧ್ಯಕ್ಷರಾಗುವುದಕ್ಕೆ ಲಾಯಕ್ ಅಲ್ಲ. ಬಾಯಿಗೆ ಏನ್ ಏನು ಬರುತ್ತದೋ ಅದನ್ನು ಬಂದ ಹಾಗೇ ಮಾತನಾಡುತ್ತಾರೆ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಏಕೆಂದರೆ ಕಟೀಲ್ ಪ್ರಭುದ್ಧ ರಾಜಕಾರಣಿ ಅಲ್ಲ ಎಂದು ಟಾಂಗ್ ನೀಡಿದರು.
ನರೇಂದ್ರ ಮೋದಿ ಸಾಧನೆ ನೋಡಿ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಪೆಟ್ರೋಲಿಯಂ ಬೆಲೆ ಹೆಚ್ಚಾಗಿರುವುದು ಒಳ್ಳೆಯದಾ? ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಅದು ಒಳ್ಳೆಯದಾ? ಜನರನ್ನು ಸಾಲದ ಸುಳಿಗೆ ಸಿಲುಕಿದ್ದು ಒಳ್ಳೆಯದಾ ಎಂದು ಪ್ರಶ್ನಿಸಿದರು. ದೇಶದಲ್ಲಿ ಸಾಲದ ಪ್ರಮಾಣ ತೀವ್ರ ಹೆಚ್ಚಳವಾಗಿದೆ. ಪಠ್ಯ ಪುಸ್ತಕದಲ್ಲಿ ಉದ್ದೇಶ ಪೂರ್ವಕವಾಗಿ ಅನೇಕ ತಪ್ಪು ಮಾಡಿದ್ದಾರೆ. ಅಂಬೇಡ್ಕರ್ ಬಗ್ಗೆ ಚರಿತ್ರೆಯ ಅಗತ್ಯತೆ ಇದೆ. ಸಂವಿಧಾನ ಶಿಲ್ಪಿ ಎನ್ನುವುದನ್ನು ತೆಗೆದು ಹಾಕಿದರೆ ಹೇಗೆ? ಕುವೆಂಪು ಫೋಟೋ ತೆಗೆದು ಹಾಕಿದರೆ ಅವಮಾನ ಅಲ್ಲವೇ? ನಾರಾಯಣಗುರು, ಬಸವಣ್ಣ, ಸುರಪುರ ನಾಯಕರನ್ನು ಅವಮಾನ ಮಾಡಿ ಪಠ್ಯವನ್ನು ಕೇಸರಿಕರಣ ಮಾಡಲು ಹೋರಟಿದ್ದಾರೆ ಎಂದು ಕಿಡಿಕಾರಿದರು.
ವಿದ್ಯಾರ್ಥಿಗಳಿಗೆ ವೈಚಾರಿಕ ಶಿಕ್ಷಣ ಸಿಗಬೇಕು. ಇತಿಹಾಸ ತಿರುಚುವ ಕೆಲಸ ಮಾಡಬಾರದು. ಮುಖ್ಯಮಂತ್ರಿ, ಶಿಕ್ಷಣ ಸಚಿವರು ತಪ್ಪು ತಿದ್ದುತ್ತೇವೆ ಎಂದಿದ್ದಾರೆ. ಅಂದ ಮೇಲೆ ನಾವೇಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿದ್ದು ಅಂಬೇಡ್ಕರ್. ಅದನ್ನು ಮಕ್ಕಳಿಗೆ ಹೇಳದೇ ಸಮಿತಿಯನ್ನು ವಿಸರ್ಜನೆ ಮಾಡಿ, ಪಠ್ಯ ಮುಂದುವರೆಸಿದರೆ ಹೇಗೆ? ವೈಚಾರಿಕ, ವೈಜ್ಞಾನಿಕ ಮನೋಭಾವ ಇರುವ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಬಿಎಸ್‍ವೈ ಹೇಳಿಕೆಗೆ, ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕಿತ್ತು ಹಾಕಿದ್ದಾರೆ. ಮಗನಿಗೆ ಎಂ ಎಲ್‍ಸಿ ಟಿಕೆಟ್ ಕೊಡಿಸಲು ಆಗಲಿಲ್ಲ. ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿ ಬಹಳ ದಿನ ಆಯಿತು ಎಂದು ಲೇವಡಿ ಮಾಡಿದರು. ನಂತರ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಭೇಟಿ ವೇಳೆ ಕೇವಲ ಹಲೋ, ಹಲೋ ಅಷ್ಟೇ. ಬೊಲೋ, ಬೊಲೋ ಅಂತ ಏನು ಮಾತನಾಡಿಲ್ಲ ಎಂದರು.