ಬೆಂಗಳೂರು: ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ನೇರ ಕಾಣರಾದ್ದರಿಂದ ಅವರನ್ನು ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಈಶ್ವರಪ್ಪ ಅವರೇ ಸಾವಿಗೆ ಕಾರಣ ಎಂದು ನೇರ ಆರೋಪ ಮಾಡಿರುವ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈಶ್ವರಪ್ಪ ಅವರ ವಿರುದ್ಧ ಸೆಕ್ಷನ್ 302 ರಡಿ ಕೇಸ್ ದಾಖಲಿಸಬೇಕು ಮತ್ತು ತಕ್ಷಣ ಈಶ್ವರಪ್ಪ ಅವರನ್ನು ಬಂಧಿಸಬೇಕು.
ಈ ಕೂಡಲೇ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಕೊಲೆ ಆರೋಪ ಎದುರಿಸುತ್ತಿರುವ ಈಶ್ವರಪ್ಪ ಅವರು ಸಚಿವ ಸಂಪುಟದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಕಾಶ ನೀಡಬಾರದು. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಬಹುದು, ಆದ್ದರಿಂದ ಇದೊಂದು ಗಂಭೀರ ಪ್ರಕರಣವಾಗಿದೆ. ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಆರೋಪಿಸಿದರು
ಅಷ್ಟೇ ಅಲ್ಲದೇ ಇದೊಂದು ಭ್ರಷ್ಟಾಚಾರ ಪ್ರಕರಣವೂ ಆಗಿದೆ. ಸಂತೋಷ್ ಪಾಟೀಲ್ ಅವರು ಈಗಾಗಲೇ ಈಶ್ವರಪ್ಪ ಅವರಿಗೆ ಕಮಿಷನ್ ನೀಡಿದ್ದರು.
ಗುತ್ತಿಗೆ ಕಾಮಗಾರಿಯ ಬಾಕಿ ಅನುದಾನ ಬಿಡುಗಡೆ ಮಾಡಲು ಸಚಿವರು ಹೆಚ್ಚಿನ ಕಮಿಷನ್ಗೆ ಬೇಡಿಕೆ ಇಟ್ಟಿದ್ದಾರೆ. ಆತನಿಗೆ ಈ ಹಣ ಹೊಂದಿಸಲು ಸಾಧ್ಯವಾಗದ ಕಾರಣಕ್ಕೆ ಮನನೊಂದು ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಿದರು.
ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಆತ್ಮಹತ್ಯೆಗೆ ಶರಣಾಗುವ ಮುನ್ನ ಆತ ಈಶ್ವರಪ್ಪ ಅವರೇ ನನ್ನ ಸಾವಿಗೆ ನೇರ ಕಾರಣ ಎಂದು ಆರೋಪ ಮಾಡಿರುವುದರಿಂದ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.
ಈಗ ಈಶ್ವರಪ್ಪ ಅವರು ಏನು ಪ್ರತಿಕ್ರಿಯೆ ಕೊಡುತ್ತಾರೆ ಎನ್ನುವುದು ಮುಖ್ಯವಲ್ಲ, ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮಾಡಿರುವ ಆರೋಪ ಮುಖ್ಯ. ಹಾಗಾಗಿ ಈಶ್ವರಪ್ಪ ಅವರ ಮೇಲೆ ಸೆಕ್ಷನ್ 302 ರಡಿ ಕೊಲೆ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು. ಸಂಪುಟದಿಂದ ವಜಾಗೊಳಿಸಿ ಅವರ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು. ಇವ್ಯಾವುದನ್ನು ಅವರು ಮಾಡಿಲ್ಲ. ಈ ಬಗ್ಗೆ ನಾವು ಧ್ವನಿ ಎತ್ತುತ್ತೇವೆ. ಈಶ್ವರಪ್ಪ ಹೇಳಿಕೆಗೆ ನಾವು ಮಹತ್ವ ನೀಡಲ್ಲ, ಅವರೊಬ್ಬ ಕೊಲೆ ಆರೋಪ ಹೊತ್ತಿರುವ ವ್ಯಕ್ತಿ, ಅವರು ಎಷ್ಟು ದೊಡ್ಡ ಭ್ರಷ್ಟ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು