ಕೂಗು ನಿಮ್ಮದು ಧ್ವನಿ ನಮ್ಮದು

ಬಿಜೆಪಿ ಬಾಯಲ್ಲಿ ಬೆಣ್ಣೆ, ಕಂಕುಳಲ್ಲಿ ದೊಣ್ಣೆ ಹಿಡಿದಂತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷ ಜಾತ್ಯಾತೀತ ಸಿದ್ಧಾಂತಕ್ಕೆ ಬದ್ಧವಾಗಿದೆ. ಬಿಜೆಪಿ ಪಕ್ಷ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತ ಮಾಡಲು ಹೊರಟಿದೆ. ನರೇಂದ್ರ ಮೋದಿ ಅವರು ಬೇಟಿ ಬಚಾವೋ ಬೇಟಿ ಪಡಾವೋ ಎನ್ನುತ್ತಾರೆ, ಇದೊಂದು ರೀತಿ ಬಾಯಲ್ಲಿ ಬೆಣ್ಣೆ, ಕಂಕುಳಲ್ಲಿ ದೊಣ್ಣೆ ಎಂಬ ಗಾಧೆ ಮಾತಂತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿ, ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಹೇಳೋದು ಒಂದು, ಮಾಡೋದು ಅದಕ್ಕೆ ವಿರುದ್ಧವಾದ ಕೆಲಸ, ಹಿಜಾಬ್ ವಿವಾದಕ್ಕೆ ಕಾರಣವಾದ ಯಾವುದೇ ಸಂಘಟನೆ ಇದ್ರು ಅದನ್ನು ಖಂಡಿಸುತ್ತೇನೆ.

ಅದು ಆರ್.ಎಸ್.ಎಸ್ ಇರಲಿ, ಎಸ್.ಡಿ.ಪಿ.ಐ ಇರಲಿ, ಭಜರಂಗ ದಳವಿರಲಿ, ಎಲ್ಲಾ ಮೂಲಭೂತವಾದಿ ಸಂಘಟನೆಗಳ ವಿರುದ್ಧ ನನ್ನ ಖಂಡನೆಯಿದೆ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವುದು ದೇಶದ್ರೋಹದ ಕೆಲಸ. ಯಾವ ಧರ್ಮ, ಜಾತಿಯವರೇ ಆದ್ರು ಅವರಿಗೆ ಶಿಕ್ಷಣ ಸಿಗಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರು. ಸಂಘ ಪರಿವಾದವರು ಅನಗತ್ಯವಾಗಿ ಹಿಜಾಬ್ ವಿವಾದವನ್ನು ಹುಟ್ಟು ಹಾಕಿದ್ದಾರೆ. ಹಿಜಾಬ್ ಧರಿಸುವುದು ನಿನ್ನೆ ಮೊನ್ನೆ ಆರಂಭವಾದುದ್ದಲ್ಲ, ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲವರು ಧರಿಸುತ್ತಾರೆ, ಆದರೆ ಇನ್ನೂ ಕೆಲವರು ಧರಿಸಲ್ಲ ಅದು ಮುಸ್ಲಿಂ ವಿದ್ಯಾರ್ಥಿಗಳ ವೈಯಕ್ತಿಕ ಆಯ್ಕೆ.

ಹಿಜಾಬ್ ಧರಿಸುವುದರಿಂದ ಇತರರಿಗೆ ಯಾವ ತೊಂದರೆ ಕೂಡ ಆಗಲ್ಲ. ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿದೆ ಸಹ, ಧರ್ಮದ ಸಂಪ್ರದಾಯದ ಪ್ರಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈವರೆಗೆ ಯಾವ ತಕರಾರು ಇರಲಿಲ್ಲ. ಇದಕ್ಕೆ ಸಂವಿಧಾನವು ಸಹ ಅವಕಾಶ ನೀಡಿದೆ. ಇದು ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. ಇದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಮುಸ್ಲಿಮರು ಇತ್ತೀಚೆಗೆ ಶಿಕ್ಷಣದ ಕಡೆಗೆ ಒಲವು ತೋರಿ ಶಾಲಾ ಕಾಲೇಜಿಗೆ ಬರುತ್ತಿದ್ದಾರೆ, ಮೊದಲೆಲ್ಲ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವ ಪ್ರಮಾಣ ಕಡಿಮೆಯಿತ್ತು, ಸಂಘ ಪರಿವಾರದವರು ಹಿಜಾಬ್ ವಿವಾದ ಮಾಡಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರ ಮಾಡಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರಿಗೂ ಈ ರೀತಿ ಮಾಡಬಾರದು, ಶಿಕ್ಷಣ ಮೂಲಭೂತ ಹಕ್ಕಾಗಿದೆ. ಮನಮೋಹನ್ ಸಿಂಗ್ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ತಂದಿತ್ತು, ಆ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಮಧ್ಯಂತರ ತೀರ್ಪು ಬಂದಿದೆ. ಶಾಲಾಭಿವೃದ್ಧಿ ಕಮೀಟಿ ಇರುವ ಶಾಲೆಗಳಲ್ಲಿ ಅವರು ಒಂದು ಸಮವಸ್ತ್ರ ನೀತಿ ರೂಪಿಸಿದ್ದರೆ ಅಲ್ಲಿ ಮಾತ್ರ ಈ ಆದೇಶ ಅನ್ವಯವಾಗುತ್ತೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಎಲ್ಲರಿಗೂ ಇದು ಅನ್ವಯವಾಗಲ್ಲ. ಚಾಮರಾಜನಗರದಲ್ಲಿ ಸಚಿವ ಅಶ್ವಥ್ ನಾರಾಯಣ್ ಈ ಸಮವಸ್ತ್ರ ನೀತಿ ಪದವಿ ಕಾಲೇಜುಗಳಿಗೆ ಅನ್ವಯವಾಗಲ್ಲ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಎಂಬುವವರು ಮೊನ್ನೆ ಹದಿನಾರನೇ ತಾರೀಖು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಮೇಲ್ಕಂಡ ಆದೇಶವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿನ ವಸತಿ ಶಾಲಾ ಕಾಲೇಜುಗಳು, ಮೌಲಾನಾ ಆಜಾದ್ ಮಾದರಿ ಶಾಲೆಗಳು ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ.

ಮೊದಲನೆಯದಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯೇ ಇರುವುದಿಲ್ಲ, ಶಾಲಾಭಿವೃದ್ಧಿ ಕಮಿಟಿ ಇಲ್ಲದಿದ್ದಾಗ ಸಮವಸ್ತ್ರ ನೀತಿ ರೂಪಿಸುವುದು ಯಾರು? ಹೀಗಿದ್ದಾಗ ನ್ಯಾಯಾಲಯದ ಆದೇಶ ಪಾಲನೆ ಎಲ್ಲಿ ಸಾಧ್ಯ? ಈ ಸುತ್ತೋಲೆ ಸಂಪೂರ್ಣ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ ಎಂದು ವಿಪಕ್ಷ ನಾಯಕ ತಿಳಿಸಿದರು. ಅಲ್ಪಸಂಖ್ಯಾತ ನಿಯೋಗದ ಜೊತೆ ಡಿ.ಕೆ ಶಿವಕುಮಾರ್ ಅವರೊಂದಿಗೆ ಸಿಎಂ ಭೇಟಿ ಮಾಡಿ ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ಹೇಳಿದ್ದೇವೆ. ಮುಖ್ಯಮಂತ್ರಿಗಳು ಸಂಬಂಧಪಟ್ಟವರ ಜೊತೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಹಾಗೂ ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತೇವೆ ಎಂದ್ರು.

ಸರ್ಕಾರದ ನಿಲುವೇ ಗೊಂದಲಮಯವಾಗಿದೆ. ಇದರಿಂದ ಮುಸ್ಲಿಂ ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಸಿಎಂ ತಕ್ಷಣ ಸಭೆ ಕರೆದು ಈ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇನೆ. ಶಿಕ್ಷಣ ಸಂಸ್ಥೆಗಳ ಹತ್ತಿರ ಪೊಲೀಸರಿಗೇನು ಕೆಲಸ? ಪೊಲೀಸರ ಮೂಲಕ ಹೆದರಿಸೋದು ಯಾಕೆ? ಕೇಸ್ ಹಾಕ್ತೀವಿ, ಅರೆಸ್ಟ್ ಮಾಡ್ತೀವಿ ಎಂಬ ಚಿಕ್ಕ ಮಕ್ಕಳನ್ನು ಹೆದರಿಸೋದು ಯಾಕೆ? ಇದೇನು ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರವೋ? ಸರ್ಕಾರವೇ ಇದನ್ನು ಇತ್ಯರ್ಥ ಮಾಡಬಹುದಿತ್ತು, ನ್ಯಾಯಾಲಯದ ಮೆಟ್ಟಿಲು ಹತ್ತಲು ಅವಕಾಶವೇ ಕೊಡಬಾರದಿತ್ತು. ಸರ್ಕಾರ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ದುರುದ್ದೇಶದಿಂದ ವಿವಾದದ ಆರಂಭದಲ್ಲೇ ಅಲಕ್ಷ್ಯ ತೋರಿದ ಕಾರಣಕ್ಕೆ ಇವತ್ತು ಇದು ದೊಡ್ಡದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ವಿದ್ಯಾರ್ಥಿಗಳು ಸಮವಸ್ತ್ರ ವಿರೋಧಿಸಿಲ್ಲ. ಸಮವಸ್ತ್ರದೊಂದಿಗೆ ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಎಫ್‍ಐಆರ್ ದಾಖಲು ಮಾಡುತ್ತಿರುವುದು ತಪ್ಪು. ಇದಕ್ಕೆಲ್ಲ ಸರ್ಕಾರವೇ ಕಾರಣ ಎಂದು ಸಿದ್ದರಾಮಯ್ಯ ಕಿಡಿಕಾರಿದ್ರು.

error: Content is protected !!