ಶಿವರಾತ್ರಿ ಹತ್ತಿರ ಬರ್ತಿದ್ದಂತೆ ಭಕ್ತರ ಸಂಭ್ರಮ ಹೆಚ್ಚಾಗ್ತಿದೆ. ಜಾಗರಣೆಗೆ ದೇವಸ್ಥಾನಗಳಲ್ಲಿ ತಯಾರಿ ನಡೆಯುತ್ತಿದೆ. ಶಿವರಾತ್ರಿ ದಿನ ಉಪವಾಸ ಮಾಡೋರು ಆರೋಗ್ಯದ ಬಗ್ಗೆಯೂ ಕಾಳಜಿವಹಿಸ್ಬೇಕು. ಇಲ್ಲವೆಂದ್ರೆ ಹಬ್ಬ ಮುಗಿದ್ಮೇಲೆ ಸಮಸ್ಯೆ ಎದುರಿಸಬೇಕಾಗುತ್ತದೆ. ಶಿವರಾತ್ರಿಗೆ ಇನ್ನು ಎರಡೇ ದಿನ ಬಾಕಿ ಇದೆ. ಶಿವರಾತ್ರಿಯ ನಿಮಿತ್ತ ಅನೇಕ ಕಡೆ ಪೂರ್ವ ತಯಾರಿಗಳು ಈಗಾಗಲೇ ಆರಂಭವಾಗಿದೆ. ಶಿವನನ್ನು ಪೂಜಿಸಲು ಎಲ್ಲ ದೇವಾಲಯಗಳು, ಭಕ್ತರು ಉತ್ಸುಕರಾಗಿದ್ದಾರೆ. ಶಿವರಾತ್ರಿಯೆಂದರೆ ಉಪವಾಸ, ಜಾಗರಣೆಗಳು ಇದ್ದದ್ದೆ. ಅನೇಕ ಮಂದಿ ರಾತ್ರಿಯಿಡಿ ಜಾಗರಣೆ ಮಾಡಿ ಶಿವನ ಭಕ್ತಿಯಲ್ಲಿ ಮುಳುಗುತ್ತಾರೆ. ಇನ್ನೂ ಅನೇಕರು ಆಹಾರವನ್ನು ತೆಗೆದುಕೊಳ್ಳದೆ ಹಾಗೆಯೇ ಇರುತ್ತಾರೆ. ಬಹಳ ಮಂದಿ ಅಲ್ಪ ಆಹಾರವನ್ನು ಸೇವಿಸುತ್ತಾರೆ.
ಒಂದು ದಿನದ ಉಪವಾಸ ಆದರೂ ಕೂಡ ಅದು ನಮ್ಮ ಶರೀರದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ ಸಕ್ಕರೆ ಖಾಯಿಲೆಗಳಿಂದ ಬಳಲುತ್ತಿರುವವರಂತೂ ಉಪವಾಸಾದಿ ವೃತಗಳನ್ನು ಕೈಗೊಳ್ಳುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಕೆಲವರಿಗೆ ಉಪವಾಸದಿಂದ ತಲೆ ಸುತ್ತುತ್ತದೆ. ಕೆಲವರಿಗೆ ಗ್ಯಾಸ್ ಸಮಸ್ಯೆ, ಎಸಿಡಿಟಿ ಸಮಸ್ಯೆಯಾಗುತ್ತದೆ. ಹಾಗಾಗಿ ಉಪವಾಸ ಮಾಡುವವರು ಯಾವ ರೀತಿ ಆಹಾರ ತೆಗೆದುಕೊಳ್ಳಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು.
ಶಿವರಾತ್ರಿಯಂದು ಮೊದಲ ಬಾರಿ ಉಪವಾಸ ಮಾಡ್ತಿದ್ದರೆ ಇದು ನೆನಪಿರಲಿ :
ನೀರು ಕುಡಿಯೋದು ಮರೆಯಬೇಡಿ : ಉಪವಾಸದ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಎಂಟು ಗ್ಲಾಸ್ ನೀರನ್ನು ಕುಡಿಯಬೇಕು. ನೀರನ್ನು ಕುಡಿಯುವುದರಿಂದ ದೇಹದಲ್ಲಿನ ವಿಷಯುಕ್ತ ಪದಾರ್ಥಗಳು ಶರೀರದಿಂದ ಹೊರಹೋಗುತ್ತವೆ. ಇನ್ನು ಕೆಲವರು ಶಿವರಾತ್ರಿಯಂದು ನೀರನ್ನು ಮಾತ್ರ ಕುಡಿದು ಉಪವಾಸ ಮಾಡ್ತಾರೆ. ಅಂತವರು ನಿಮ್ಮ ಅವಶ್ಯಕತೆಗೆ ತಕ್ಕಷ್ಟು ನೀರನ್ನು ಕುಡಿಯಬಹುದು. ಶಿವರಾತ್ರಿಯಂದು ದ್ರವ ಆಹಾರವನ್ನು ಮಾತ್ರ ಸೇವಿಸುವವರು ವಿವಿಧ ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್, ಹರ್ಬಲ್ ಟೀ, ಮಜ್ಜಿಗೆಗಳನ್ನು ಮಾಡಿ ಕುಡಿಯಬಹುದು. ಇವುಗಳಲ್ಲಿರುವ ಪೋಷಕಾಂಶ ಮತ್ತು ವಿಟಮಿನ್ ಗಳು ಶರೀರಕ್ಕೆ ಶಕ್ತಿ ನೀಡುತ್ತವೆ.
ಉಪವಾಸದಲ್ಲಿ ಮನಸ್ಸು ಶಾಂತವಾಗಿರಲಿ : ಶಾರೀರಿಕವಾಗಿ ನಾವು ಎಷ್ಟೇ ಬಲಶಾಲಿಗಳಾಗಿದ್ದರೂ ನಮ್ಮ ಒತ್ತಡ, ಕೋಪ ಅಥವಾ ಚಿಂತೆಗಳು ನಮ್ಮ ಶಕ್ತಿಯನ್ನು ಕುಗ್ಗಿಸುತ್ತವೆ. ಹಾಗಾಗಿ ಶಿವರಾತ್ರಿಯಂದು ವೃತ ಮಾಡುವವರು ತಮ್ಮ ಮನಸ್ಸನ್ನು ಕೂಡ ಶಾಂತವಾಗಿಟ್ಟುಕೊಳ್ಳಬೇಕು. ತಲೆಯಲ್ಲಿ ಯಾವುದೇ ರೀತಿಯ ಟೆನ್ಶನ್ ಅಥವಾ ಕೆಟ್ಟ ವಿಚಾರಗಳನ್ನು ಇಟ್ಟುಕೊಂಡರೆ ಅದರಿಂದಲೇ ದೇಹಕ್ಕೆ ಆಯಾಸವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಳ್ಳೆಯ ವಿಚಾರ, ಚಿಂತನೆಗಳಿಂದ ದೇಹಕ್ಕೆ ಕೂಡ ಎನರ್ಜಿ ಸಿಗುತ್ತದೆ. ಅದರಿಂದ ಸುಲಭವಾಗಿ ವೃತವನ್ನು ಪೂರ್ಣಮಾಡಲು ಸಾಧ್ಯವಾಗುತ್ತದೆ. ಒಳ್ಳೆಯ ಮನಸ್ಸಿನಿಂದ ಉಪವಾಸದ ವೃತ ಮಾಡಿದರೆ ಈಶ್ವರ ಕೂಡ ಪ್ರಸನ್ನನಾಗುತ್ತಾನೆ.
ಡ್ರೈ ಫ್ರೂಟ್ಸ್ ಸೇವಿಸಿ : ಶಿವರಾತ್ರಿಯಂದು ಬಹಳ ಮಂದಿ ರಾತ್ರಿ ಜಾಗರಣೆ ಮಾಡುತ್ತಾರೆ. ಅಂತವರು ಆರೋಗ್ಯಕ್ಕೆ ಬಹಳ ಒಳ್ಳೆಯದಾದ ಮತ್ತು ಬಹಳ ಬೇಗ ಶರೀರಕ್ಕೆ ಎನರ್ಜಿಯನ್ನು ಕೊಡುವಂತ ಡ್ರೈ ಫ್ರುಟ್ಸ್ ಗಳನ್ನು ಸೇವಿಸಬಹುದು. ಇದರಿಂದ ಆರೋಗ್ಯ ಕೂಡ ಚೆನ್ನಾಗಿರುತ್ತೆ . ದೀರ್ಘ ಸಮಯ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ರಾತ್ರಿಯ ಹೊತ್ತು ಜಾಗರಣೆ ಮಾಡುವವರಿಗೆ ಇದರಿಂದ ಬೇಗ ಹಸಿವಾಗುವುದಿಲ್ಲ.
ವೃತದ ಸಂದರ್ಭದಲ್ಲಿ ಇವನ್ನೂ ಸೇವಿಸಿ : ಶಿವರಾತ್ರಿಯಂದು ಕ್ಯಾರೆಟ್, ಸೋರೆಕಾಯಿ, ಸಾಬೂದಾನದ ಖೀರ್ ತಯಾರಿಸಿಕೊಂಡು ಸವಿಯಬಹುದು. ಹಾಲು, ಮೊಸರನ್ನು ಇಷ್ಟಪಡುವವರು ಅದನ್ನು ಕೂಡ ತಿನ್ನಬಹುದು. ಮಖನಾ ಅಥವಾ ಕಡಲೆಕಾಯಿಗೆ ಸ್ವಲ್ಪ ಕಲ್ಲುಪ್ಪನ್ನು ಸೇರಿಸಿ ತುಪ್ಪದಲ್ಲಿ ಹುರಿದು ತಿನ್ನಬಹುದು. ಉಪವಾಸದ ದಿನ ಆಲೂಗಡ್ಡೆ, ಗೆಣಸು, ಬಾಳೆಹಣ್ಣು, ಪಪ್ಪಾಯಿಯನ್ನು ಕೂಡ ಸೇವಿಸಬಹುದು.
ಇವುಗಳಿಂದ ದೂರವಿರಿ : ಶಿವರಾತ್ರಿಯಂದು ಕರಿದ ಪದಾರ್ಥಗಳು ಹಾಗೂ ಅತಿಯಾದ ಖಾರದ ಪದಾರ್ಥಗಳನ್ನು ತಿನ್ನಬೇಡಿ. ಶರೀರಕ್ಕೆ ಒಳ್ಳೆಯದೆನಿಸುವ ಆಹಾರವನ್ನು ಮಿತವಾಗಿಯೇ ಸೇವಿಸಿ. ಅಜೀರ್ಣ, ಹೊಟ್ಟೆಉರಿ, ಎಸಿಡಿಟಿ ಮಲಬದ್ಧತೆ ಆಗದಂತೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ