ತುಮಕೂರು: ಶಿರಾ ಉಪಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮತಬೇಟೆಯ ಕಸರತ್ತು ಮುಂದುವರೆದಿದೆ. ಹೆಚ್.ಡಿ.ಕುಮಾರಾಸ್ವಾಮಿ ಪುತ್ರ ನಿಖಿಲ್ ಕೂಡ ಇಂದು ಶಿರಾ ಪ್ರಚಾರದ ಕಣಕ್ಕೆ ಧುಮುಕ್ಕಿದ್ದು, ಅಪ್ಪ ಮಗ ಇಬ್ಬರೂ ಜೆಡಿಎಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಒಂದೆಡೆ ನಿಖಿಲ್ ಶಿರಾದ ಸ್ಪಟಿಕಪುರಿ ಮಠಕ್ಕೆ ಭೇಟಿ ನೀಡಿದ್ರೇ, ಇನ್ನೊಂದೆಡೆ ಶಿರಾ ಬಿಜೆಪಿ ಉಸ್ತುವಾರಿ ವಿಜಯೇಂದ್ರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ನಿಂದ ಐದು ಮಂದಿ ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ ಅಂತಾ ಶಿರಾದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಶಿರಾ ಉಪಚುನಾವಣೆ ಸಮೀಪಿಸುತ್ತಿರೋ ಬೆನ್ನಲ್ಲೆ ಮೂರು ಪಕ್ಷಗಳ ಪ್ರಚಾರ ಇನ್ನಷ್ಟು ಚುರುಕಾಗಿದೆ. ಶಿರಾ ಉಪ ಚುನಾವಣೆಯ ಬಿಜೆಪಿ ಉಸ್ತುವಾರಿ ವಿಜಯೇಂದ್ರ ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವೈಕ್ಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ನಮಿಸಿದ್ದಾರೆ. ಬಳಿಕ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಜಿಗಳ ಜೊತೆ ಅರ್ಧ ಗಂಟೆಗಳ ಕಾಲ ಚರ್ಚಿಸಿದ್ದಾರೆ. ಇನ್ನು ಶಿರಾದ ಪ್ರಚಾರದಲ್ಲಿ ಬಿರುಸು ಪಡೆದಿರೋ ಜೆಡಿಎಸ್, ಇಂದು ಕ್ಷೇತ್ರದ ವಿವಿಧೆಡೆ ಪ್ರಚಾರ ಸಭೆ ನಡೆಸಿ ಅಭ್ಯರ್ಥಿ ಅಮ್ಮಾಜಮ್ಮ ಪರ ಹೆಚ್.ಡಿ.ಕುಮಾರಸ್ವಾಮಿ ಹಾಗು ಪುತ್ರ ನಿಖಿಲ್ ಕುಮಾರಸ್ವಾಮಿ ಮತಯಾಚಿಸಿದ್ರು. ಪ್ರಚಾರಕ್ಕೂ ಮುನ್ನ ಶಿರಾದ ಸ್ಪಟಿಕಪುರಿ ಗುರಗುಂಡ ಬ್ರಹ್ಮೇಶ್ವರ ಮಠಕ್ಕೆ ಭೇಟಿ ನೀಡಿ ನಂಜಾವಧೂತ ಶ್ರೀಗಳ ಭೇಟಿ ಮಾಡಿ ಆರ್ಶಿವಾದ ಪಡೆದಿದ್ದಾರೆ. ಬಳಿಕ ಪಟ್ಟನಾಯಕನಹಳ್ಳಿ, ಕಳ್ಳಂಬೆಳ್ಳ, ಕುಂಟೇಗೌಡನಹಳ್ಳಿ ಭಾಗಗಳಲ್ಲಿ ನಿಖಿಲ್ ಪ್ರಚಾರ ನಡೆಸಿದ್ರೇ, ಮೇಲುಕುಂಟೆ, ಕೊಟ್ಟ ಗ್ರಾಮಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ರು. ಉತ್ತರ ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ಮಳೆ ಅನಾಹುತದಿಂದ ಹಳ್ಳಿಗಳು ಜಲಾವೃತವಾಗಿ ಗರ್ಭಿಣಿ ತಾಯಂದಿರು ರಸ್ತೆಯಲ್ಲಿ ಮಲಗಿದ್ರು ಸರ್ಕಾರ ಯಾವುದೇ ನೆರವನ್ನು ಕೊಡದೆ, ಹಸಿವು ನೀಗಿಸದೇ, ಶಿರಾದಲ್ಲಿ ಗೆದ್ದು ಬಿಟ್ಟಿದ್ದೀವಿ ಅಂತಾ ದುರಂಹಕಾರದ ಮಾತುಗಳನ್ನ ಆಡುತ್ತಿದ್ದಾರೆ ಅಂತಾ ಸರ್ಕಾರದ ವಿರುದ್ದ ಹೆಚ್ಡಿಕೆ ಗುಡುಗಿದ್ದಾರೆ. ಮತ್ತೊಂದೆಡೆ ಶಿರಾದ ತಾವರೇಕೆರೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಕಾಂಗ್ರೆಸ್ ನಿಂದ 5 ಮಂದಿ ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ ಅಂತಾ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ನಮ್ಮ ಶಾಸಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು 71 ಇರುವ ಕಾಂಗ್ರೆಸ್ ಶಾಸಕರ ಸಂಖ್ಯೆ 66 ಕ್ಕೆ ಕುಸಿಯಲಿದೆ. ಕಾಂಗ್ರೆಸ್ ಗೆ ಭವಿಷ್ಯ ಇಲ್ಲಾ. ನಮ್ಮನ್ನು ಕರೆದುಕೊಳ್ಳಿ ಎಂದು ಕಾಂಗ್ರೆಸ್ ಶಾಸಕರು ಕೇಳುತ್ತಿದ್ದಾರೆ ಅನ್ನೋ ಹೇಳಿಕೆ ನೀಡುವ ಮೂಲಕ ಮತ್ತೆ ಆಪರೇಷನ್ ಬಿಜೆಪಿ ನಡೆಯುತ್ತಿದ್ಯಾ ಅನ್ನೋ ಸಂದೇಹ ಹುಟ್ಟು ಹಾಕಿದ್ದಾರೆ. ಕಳೆದ ವಾರದಿಂದ ಕ್ಷೇತ್ರದಲ್ಲೇ ಬೀಡುಬಿಟ್ಟಿರೋ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಚುನಾವಣಾ ರಣತಂತ್ರ ಹೆಣೆಯೋದ್ರಲ್ಲಿ ನಿರತರಾಗಿದ್ದಾರೆ. ಕ್ಷೇತ್ರದಲ್ಲಿದ್ದುಕೊಂಡು ಪ್ರಚಾರದಲ್ಲಿ ಭಾಗಿಯಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಿನ್ನೆ ತಡರಾತ್ರಿ ವಾಪಸ್ಸಾಗಿದ್ದಾರೆ. ಒಟ್ಟಾರೆ ಮೂರು ಪಕ್ಷಗಳಿಂದ ಮತದಾರನ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸುವಂತಾಗಿದೆ.