ಹೈದರಾಬಾದ್: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿನ ತಮ್ಮ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳಬೇಕೆಂದು ಟ್ವೀಟ್ ಮಾಡಿದ್ದ ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಅವರಿಗೆ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ವೇದಿಕೆ ಮೇಲೆಯೇ ತಿರುಗೇಟು ನೀಡಿದ ಪ್ರಸಂಗ ನಡೆದಿದೆ.
ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿನ ಶಿಖರ್ ಧವನ್ ಅವರ ಸ್ಟ್ರೈಕ್ ರೇಟ್ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಶಿಖರ್ ಧವನ್ ಅವರು ಬ್ಯಾಟಿಂಗ್ನಲ್ಲಿ ಇನ್ನಷ್ಟು ಆಕ್ರಮಣಕಾರಿಯಾಗಬೇಕು ಹಾಗೂ ಬ್ಯಾಕೆಂಡ್ನಲ್ಲಿ ಇವರು ತನ್ನ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳಬೇಕೆಂದು ಹರ್ಷ ಬೋಗ್ಲೆ ಟ್ವೀಟ್ ಮಾಡಿದ್ದರು.
“ಶಿಖರ್ ಧವನ್ ಅವರ ಇನಿಂಗ್ಸ್ ನೋಡುವುದಾದರೆ, ವಿಶೇಷವಾಗಿ ಇಂಥಾ ಪರಿಸ್ಥಿತಿಗಳಲ್ಲಿ ಆಂಕರ್ ಪಾತ್ರ ಅಗತ್ಯವಿದೆಯೇ? ಎಂಬ ಪ್ರಶ್ನೆ ಇಲ್ಲಿ ಉಂಟಾಗುತ್ತದೆ. ಇನಿಂಗ್ಸ್ನ ಅಂತಿಮ ಹಂತದಲ್ಲಿ ನೀವು ನಿಮ್ಮ ಸ್ಟ್ರೈಕ್ ರೇಟ್ ಅನ್ನು ಹೆಚ್ಚಿಸಿರುವಂತೆ ಕಾಣಿಸಬಹುದು. ಆದರೆ, ಎಸೆತಗಳಿಗೆ ಸರಿ ಸಮನಾಗಿ ರನ್ ಗಳಿಸಿರುವುದನ್ನು ನೋಡಿದಾಗ ನೋವುಂಟಾಗಬಹುದು,” ಎಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ರನ್ ಜಯ ಗಳಿಸಿದ ಬಳಿಕ ಹರ್ಷ ಬೋಗ್ಲೆ ಟ್ವಿಟ್ ಮಾಡಿದ್ದರು.
ಅಂದಹಾಗೆ ಭಾನುವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ಶಿಖರ್ ಧವನ ಅವರು ಪಂಜಾಬ್ ಕಿಂಗ್ಸ್ ಪರ ಏಕಾಂಗಿ ಹೋರಾಟ ನಡೆಸಿದ್ದರು. ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್, ಒಂದು ತುದಿಯಲ್ಲಿ ನಿಯಮಿತವಾಗಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಿತ್ತು. ಆದರೆ, ಮತ್ತೊಂದು ತುದಿಯಲ್ಲಿ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಶಿಖರ್ ಧವನ್, 66 ಎಸೆತಗಳಲ್ಲಿ ಅಜೇಯ 99 ರನ್ ಗಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಕರನ್ 22 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್ಮನ್ಗಳು ಎರಡಂಕಿ ವೈಯಕ್ತಿಕ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡ ತನ್ನ ಪಾಲಿನ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 143 ರನ್ ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಸನ್ರೈಸರ್ಸ್ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವು ಪಡೆಯಿತು.
ಪಂಜಾಬ್ ಕಿಂಗ್ಸ್ ತಂಡ ಸೋಲು ಅನುಭವಿಸಿದ ಹೊರತಾಗಿಯೂ ಅಜೇಯ 99 ರನ್ ಗಳಿಸಿದ ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಧವನ್ ಅವರ ಈ ಸ್ಪೋಟಕ ಇನಿಂಗ್ಸ್ನಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 12 ಬೌಂಡರಿಗಳು ಒಳಗೊಂಡಿವೆ.
“ನಾನು ಅಂತಿಮ ಹಂತದಲ್ಲಿ ಇಷ್ಟು ಮೊತ್ತವನ್ನು ಕಲೆ ಹಾಕುತ್ತೇನೆಂದು ಭಾವಿಸಿರಲಿಲ್ಲ. ನಾನಿನ್ನೂ ಸಕಾರಾತ್ಮಕವಾಗಿದ್ದೇನೆ. ನೀವು ನನ್ನ ಬಗ್ಗೆ ಏನೋ ಟ್ವೀಟ್ ಮಾಡಿದ್ದೀರಿ, ಈಗ ನನ್ನ ಸ್ಟ್ರೈಕ್ ರೇಟ್ ಬಗ್ಗೆ ನಿಮಗೆ ಖುಷಿ ಇದೆ ಎಂದು ನಾನು ಭಾವಿಸುತ್ತೇನೆ,” ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ಹರ್ಷ ಬೋಗ್ಲೆಗೆ ಶಿಖರ್ ಧವನ್ ತಿರುಗೇಟು ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಹರ್ಷ ಬೋಗ್ಲೆ, “ನಿಮ್ಮ ಸ್ಟ್ರೈಕ್ ರೇಟ್ನಿಂದ ನನಗೆ ತುಂಬಾ ಖುಷಿ ಇದೆ. ಆದರೆ, ವಿಭಿನ್ನ ಸನ್ನಿವೇಶ ಹಾಗೂ ವಿಭಿನ್ನ ಪಂದ್ಯ. ನಿಮ್ಮೊಂದಿಗೆ ಈ ಸಂಭಾಷಣೆ ನಡೆಸಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ,” ಎಂದು ನಗು ಮುಖದಲ್ಲಿ ಹೇಳಿದ್ದರು. ಧವನ್ ಬಗ್ಗೆ ಮತ್ತೆ ಟ್ವೀಟ್ ಮಾಡಿದ ಬೋಗ್ಲೆ
“ಕೆಲವೊಮ್ಮೆ ಅಂತ್ಯವು ಆರಂಭವನ್ನು ಮೀರಿಸುತ್ತದೆ. ಇದು ಆರಂಭವನ್ನು ಸಮರ್ಥಿಸುವುದಿಲ್ಲ. ಆದರೆ, ಕೆಲವೊಮ್ಮೆ ಎಲ್ಲರಿಗೂ ಸಂಗತಿಗಳು ಸರಿಯಾಗಿ ನಡೆಯುತ್ತವೆ ಹಾಗೂ ಇನ್ನೂ ಕೆಲವರಿಗೆ ಸರಿಯಾಗಿ ನಡೆಯುವುದಿಲ್ಲ. ಗಮನಿಸುವುದು ನಮ್ಮ ಕೆಲಸ, ಇದು ಎಂದಿಗೂ ವೈಯಕ್ತಿಕವಲ್ಲ. ಇಲ್ಲಿ ನೀವು ಗೌರವವನ್ನು ಉಳಿಸಿಕೊಳ್ಳಬೇಕಾಗುತ್ತದೆ,” ಎಂದು ಧವನ್ ಜೊತೆಗೆ ಸಂಭಾಷಣೆ ನಡೆಸಿದ ಬಳಿಕ ಹರ್ಷ ಬೋಗ್ಲೆ ಟ್ವೀಟ್ ಮಾಡಿದ್ದರು.
“ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಶಿಖರ್ ಧವನ್ ಜೊತೆ ಸುಂದರವಾದ ಸಂಭಾಷಣೆ ನಡೆಸಿದ್ದೇನೆ. ಅವರೊಂದಿಗೆ ಯಾವಾಗಲೂ ಸುಲಭವಾದ ಸಂಭಾಷಣೆ ಇರುತ್ತದೆ. ಬೇರೆ ದಿನಗಳಲ್ಲಿಯೂ ವೇಗವಾಗಿ ಆಡಲು ಪ್ರಯತ್ನಿಸಿದ್ದೇನೆಂದು ಅವರು ಇಲ್ಲಿ ಹೇಳಿದ್ದರು. ನಾವು ಪ್ರಬುದ್ಧ ಸಂಭಾಷಣೆ ನಡೆಸಿದ್ದೇವೆ,” ಎಂದು ಬೋಗ್ಲೆ ಭಾನುವಾರ ರಾತ್ರಿ ಮತ್ತೊಂದು ಟ್ವೀಟ್ ಮಾಡಿದ್ದರು.