ಬೆಳಗಾವಿ: ಹೆಸ್ರು ಸುಬಾನಿ ಹುಕ್ಕೇರಿ.. ಹಿರಿಯ ಪತ್ರಕರ್ತ, ಮೇಲಾಗಿ ಅಪ್ಪಟ ಬಸವ ಭಕ್ತ.. ಮಾಧ್ಯಮ ಲೋಕದ ಅದ್ಭುತ ಪ್ರತಿಭೆ.. ಶ್ರೀ ಜಗಜ್ಯೋತಿ ಬಸವೇಶ್ವರರ ವಚನಗಳನ್ನ ನಿರರ್ಗಳವಾಗಿ ಹೇಳುತ್ತಿದ್ದ ಶರಣ. ಸಮಯ ಸುದ್ದಿ ವಾಹಿನಿಯಲ್ಲಿದ್ದಾಗ ಬಸವಣ್ಣನವರ ವಚನದ ಮೂಲಕವೇ ಪಿಟಿಸಿ ಕೊಡ್ತಿದ್ದ ಬಸವಪ್ರೇಮಿ.. ಬಸವತತ್ವಗಳ ಮೇಲೆ ಅಷ್ಟೊಂದು ಅಭಿಮಾನ ಸುಬಾನಿಗೆ. ಸಮಯ ನ್ಯೂಸ್, ರಾಜ್ ನ್ಯೂಸ್, ಬಿಗ್ ನ್ಯೂಸ್ ಕನ್ನಡ, ನ್ಯೂಸ್90 ಕರ್ನಾಟಕ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದ ಸುಭಾನಿ ಸರಳ ಜೀವಿ. ಪತ್ರಿಕೋದ್ಯಮದ ಬಗೆಗಿನ ಆಳವಾದ ಮಾಹಿತಿ, ಶರಣ ವಚನಗಳ ಅಪಾರ ಜ್ಞಾನ, ಅದ್ಭುತವಾದ ಕನ್ನಡ ಭಾಷಾ ಹಿಡಿತ ಹೊಂದಿದ್ದ ಸುಬಾನಿ ಇಲ್ಲ ಅನ್ನೋದನ್ನ ಅರಗಿಸಿಕೊಳ್ಳಲಾಗುತ್ತಿಲ್ಲ.
ಯಾವಾಗಲೂ ನಮ್ಮ ಚಂದ್ರು ಸರ್.. ನಮ್ಮ ಚಂದ್ರು ಸರ್, ನಮ್ಮ ಗುರುಗಳು ಅಂತ ಬಾಯ್ತುಂಬ ಕರೆಯುತ್ತಿದ್ದ ಗೆಳೆಯ, ಸರಳ ಜೀವಿ, ಹಿರಿಯ ಪತ್ರಕರ್ತ ಸುಭಾನಿ ಹುಕ್ಕೇರಿಯ ಅಕಾಲಿಕ ಸಾವು ನನಗೆ ಅತೀವ ನೋವುಂಟು ಮಾಡಿದೆ. ಈತ ಸದಾ ಹಸನ್ಮುಖಿ. ಸುಭಾನಿ ಹುಕ್ಕೇರಿ ಅಂತಲೇ ಎಲ್ಲರಿಗೂ ಚಿರಪರಿಚಿತನಾಗಿದ್ದ. ಹಿರಿಯ ಮಾಧ್ಯಮ ಸಹೋದರರನ್ನು ಅತ್ಯಂತ ಆತ್ಮೀಯ ಮಾತುಗಳಿಂದ ಮಾತನಾಡಿಸುವ ಸೌಮ್ಯ ಸ್ವಾಭಾವದ ಸುಭಾನಿ ಹುಕ್ಕೇರಿ ಇನ್ನು ನೆನಪು ಮಾತ್ರ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುಭಾನಿ ಹುಕ್ಕೇರಿ ಕಳೆದ 23 ದಿನಗಳಿಂದ ಬೆಳಗಾವಿ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.. ದುರ್ದೈವ ಇಂದು ತಡರಾತ್ರಿ 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾನೆ.
ಭಗವಂತ ಗೆಳೆಯನ ಆತ್ಮಕೆ ಚಿರಶಾಂತಿ ನೀಡಲಿ.. ಅವನ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿ ಅವನ ಕುಟುಂಬದವರಿಗೆ ಕರುಣಿಸಲಿ.. ಪತ್ರಕರ್ತ ಸುಭಾನಿ ಹುಕ್ಕೇರಿಯ ಅಂತಿಮ ವಿಧಿ-ವಿಧಾನಗಳು ಅವನ ಸ್ವಗ್ರಾಮ ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಇಂದು ದಿ: 18-04-2021 ರಂದು ಬೆಳಿಗ್ಗೆ 11 ಗಂಟೆಗೆ ನೆರವೇರಲಿದೆ. ಹೋಗಿ ಬಾ ಸುಭಾನಿ.. ಮಿಸ್ ಯು💐
- ಚಂದ್ರು ಎಚ್.ಶ್ರೀರಾಮುಡು. ಹಿರಿಯ ವರದಿಗಾರ ಪ್ರಜಾ ಟಿವಿ, ಬೆಳಗಾವಿ.