ಜಗತ್ತು ಸುಂದರವಾಗಿ ಕಾಣಲು ಕಾರಣ ಸವಿತಾ ಮಹರ್ಷಿ : ಡಾ. ನಿರ್ಮಲ ಬಟ್ಟಲ
ಬೆಳಗಾವಿ, ಜ.28 (ಕರ್ನಾಟಕ ವಾರ್ತೆ): ಶಿವನ ಕಣ್ಣಿನಿಂದ ಹುಟ್ಟಿದ ಸವಿತಾ ಮಹರ್ಷಿಯವರು ಶಿವನು ವಿಕೃತವಾಗಿ ಜಡೆಗಳನ್ನು ಬಿಟ್ಟಾಗ ಶಿವನ ಜಡೆಗಳನ್ನು ಸುಂದರವಾಗಿ ಕಾಣುವಂತೆ ಕತ್ತರಿಸಿ ಆತನನ್ನು ಸುಂದರವಾಗಿ ಮಾಡಿದವರು ಎಂದು ಡಾ.ನಿರ್ಮಲಾ ಬಟ್ಟಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ ಇವರ ಆಶ್ರಯದಲ್ಲಿ ನಗರಸ ಕುಮಾರಗಂಧರ್ವ ಕಲಾಮಂದಿರದಲ್ಲಿ ಶನಿವಾರ(ಜ28) ಏರ್ಪಡಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
ಶಿವನು ಸುಂದರವಾಗಿ ಕಾಣುತ್ತಿರುವುದರಿಂದ ಎಲ್ಲಾ ದೇವಾನು ದೇವತೆಗಳು ನಮ್ಮನ್ನು ಸುಂದರವಾಗಿ ಮಾಡಿ ಎಂದು ಸವಿತಾ ಮಹರ್ಷಿಯವರಿಗೆ ಹೇಳಿದ್ದರಿಂದ ಕ್ಷೌರಿಕ ವೃತ್ತಿ ಪ್ರಾರಂಭವಾಯಿತು. ಹೀಗೆ ಎಲ್ಲರೂ ಸುಂದರವಾಗಿ ಕಾಣುವಂತೆ ಮಾಡಿದ್ದು_ಸವಿತಾ ಮಹರ್ಷಿಯವರು ಎಂದು ಹೇಳಿದರು.
ಸಮಾಜದಲ್ಲಿ ಜನರು ಸುಂದರವಾಗಿ ಕಾಣಲು ಕಾರಣರಾದ ಸವಿತಾ ಸಮುದಾಯದ ಜನರ ಜೀವನಮಟ್ಟ ಅಭಿವೃದ್ಧಿ ಯಾಗಬೇಕು. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬೆಳೆಯಬೇಕಿದೆ.
ಈ ನಿಟ್ಟಿನಲ್ಲಿ ಎಲ್ಲರಿಗೂ ಮೂಲಭೂತ ಸೌಕರ್ಯಗಳು ದೊರಕಬೇಕು ಸಮುದಾಯಗಳು ಮುಂದೆ ಬರಬೇಕಿದೆ. ಆದ್ದರಿಂದ ಸವಿತಾ ಮಹರ್ಷಿಯವರ ಮಹತ್ವವನ್ನು ಅವರ ಇತಿಹಾಸವನ್ನು ತಿಳಿದುಕೊಂಡು ಎಲ್ಲರೂ ಜಾಗೃತರಾಗಬೇಕು ಎಂದು ಡಾ.ನಿರ್ಮಲಾ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷರಾದ ಗಜಾನನ ಕಾಶೀದ, ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ನೀಲಮ್ಮ ಟಿಪ್ಪುಪುಡೆ, ಸಮಾಜದ ಮುಖಂಡರು, ಮಹಿಳೆಯರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
ಭಾವಚಿತ್ರದ ಮೆರವಣಿಗೆ:
ಇದಕ್ಕೂ ಮುಂಚೆ ಬೆಳಗಾವಿಯ ಕೋಟೆ ಕೆರೆ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಹಾಗೂ ಇವರ ಸಂಯುಕ್ತಾಶ್ರಯದಲ್ಲಿ ಇಂದು ಏರ್ಪಡಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿಯ ಭವ್ಯ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಅಶೋಕ ದುಡಗುಂಟಿ ಅವರು ಚಾಲನೆ ನೀಡಿದರು.
ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ಕುಮಾರಗಂಧರ್ವ ರಂಗಮಂದಿರ ತಲುಪಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷರಾದ ಗಜಾನನ ಕಾಶೀದ, ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ನೀಲಮ್ಮ ಟಿಪ್ಪುಪುಡೆ, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.