ಹುಕ್ಕೇರಿ – ಭಾರತೀಯ ಜನತಾ ಪಾರ್ಟಿ ಕೇವಲ ಭರವಸೆ ನೀಡುವ ಪಕ್ಷವಾಗಿದ್ದು, ನೀಡಿದ ಒಂದೇ ಒಂದು ಭರವಸೆ ಕೂಡ ಈಡೇರಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಹುಕ್ಕೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನ ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗಿಯಾಗಿ ಅವರು ಮಾತನಾಡುತ್ತಿದ್ದರು.
ಕೋಟಿ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿ ಕೋಟ್ಯಂತರ ಜನರ ಉದ್ಯೋಗ ಕಸಿದುಕೊಂಡಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಬೆಲೆಗಳನ್ನು ನಿಯಂತ್ರಿಸುವುದಾಗಿ ಹೇಳಿ ಈಗ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರು ಬಿಜೆಪಿ ಭರವಸೆ ನಂಬಿ ಮತ ಹಾಕಿ ಈಗ ಪರಿತಪಿಸುವಂತಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಆರಿಸಿ ತನ್ನಿ ಎಂದು ಸತೀಶ್ ಮನವಿ ಮಾಡಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಜಿಲ್ಲೆಯ ಎಲ್ಲ ಕಡೆ ಜನರ ಅಭೂತಪೂರ್ವ ಪ್ರೀತಿ, ಪ್ರೋತ್ಸಾಹ, ಬೆಂಬಲ ದೊರೆಯುತ್ತಿರುವುದನ್ನು ನೋಡಿದರೆ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಕಾಂಗ್ರೆಸ್ ಎಂದೂ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡಿಲ್ಲ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ತಂದಿದೆ. ಪಂಚಾಯತ್ ರಾಜ ವ್ಯವಸ್ಥೆ ಬಲವರ್ಧನೆಗೆ ಕಾಂಗ್ರೆಸ್ ಕೊಡುಗೆ ಸಾಕಷ್ಟಿದೆ. ಹಾಗಾಗಿ ಈ ಚುನಾವಣೆಯಲ್ಲಿ ಚನ್ನರಾಜ ಹಟ್ಟಿಹೊಳಿ ಅವರಿಗೆ ಮತ ನೀಡಿ ಆರಿಸಿ ತನ್ನಿ ಎಂದು ವಿನಂತಿಸಿದರು.
ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಪಂಚಾಯಿತಿ ರಾಜ್ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಉತ್ಸಾಹದಿಂದ ಸ್ಪರ್ಧಿಸಿದ್ದೇನೆ. ಎಲ್ಲರೊಂದಿಗೆ ಸೇರಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಇನ್ನಷ್ಟು ಸಬಲೀಕರಣಗೊಳಿಸೋಣ. ಎಲ್ಲರೂ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಿ ಎಂದು ವಿನಂತಿಸಿದರು.
ಇದೇ ಸಮಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಹಲವರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಹುಕ್ಕೇರಿಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನ ಪ್ರತಿನಿಧಿಗಳು, ಹುಕ್ಕೇರಿಯ ಎಲ್ಲ ಕಾಂಗ್ರೆಸ್ ಮುಖಂಡರು, ಮಾಜಿ ಸಚಿವರಾದ ಎ. ಬಿ. ಪಾಟೀಲರು, ವೀರಕುಮಾರ ಪಾಟೀಲ, ಪ್ರಕಾಶ ಹುಕ್ಕೇರಿ, ಹುಕ್ಕೇರಿ ಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸಂತೋಷ, ಅಶೋಕ ಅಂಕಲಗಿ, ಲಕ್ಷ್ಮಣ ಚಿಂಗಳೆ, ಮಹೇಶ ಹಟ್ಟಿಹೊಳಿ, ವಿಜಯ ರವದಿ, ನಮೃತಾ ವೈರಾಗಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.