ಕೊಪ್ಪಳ: ರಾಜ್ಯ ಬಿಜೆಪಿ ಘಟಕದಲ್ಲಿ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡ ಆಕಾಂಕ್ಷಿಗಳು ಮತ್ತು ಹಾಲಿ ಶಾಸಕರು ಪಕ್ಷಕ್ಕೆ ರಾಜಿನಾಮೆ ನೀಡಿ, ಪಕ್ಷೇತರವಾಗಿ ಅಥವಾ ಬೇರೆ ಪಕ್ಷಗಳಿಗೆ ಸೇರಿಕೊಂಡು ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಟಿಕೆಟ್ ಸಿಗದಿದ್ದಕ್ಕೆ ಅಸಮಾಧನಗೊಂಡ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಹಾಲಿ ಶಾಸಕ ಜಗದೀಶ್ ಶೆಟ್ಟರ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಇವರ ಬೆನ್ನಲ್ಲೇ ಇಂದು (ಏ.16) ಬಿಜೆಪಿಯ ಮತ್ತೊಬ್ಬ ಘಟಾನುಘಟಿ ಪಕ್ಷಕ್ಕೆ ರಾಜಿನಾಮೆ ನೀಡುವ ಸಾಧ್ಯತೆ ಇದೆ.
ಹೌದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನಮಗೇ ಕೊಡಬೇಕು ಎಂದು ಹಾಲಿ ಸಂಸದ ಸಂಗಣ್ಣ ಕರಡಿ ಹಾಗೂ ಮುಖಂಡ ಸಿ.ವಿ.ಚಂದ್ರಶೇಖರ್ ಇಬ್ಬರೂ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಟಿಕೆಟ್ ಅಂತಿಮಗೊಳಿಸುವುದು ವರಿಷ್ಠರಿಗೆ ಕಗ್ಗಂಟಾಗಿದೆ. ಇವರಿಬ್ಬರಲ್ಲಿ ಯಾರು ಅಭ್ಯರ್ಥಿಯಾದರೂ ಇನ್ನೊಬ್ಬರು ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ವರಿಷ್ಠರು ಅಳಿದು-ತೂಗಿ ಟಿಕೆಟ್ ನೀಡಲು ಮುಂದಾಗಿದ್ದಾರೆ. ಸಂಗಣ್ಣ ಕರಡಿ ಅವರು ಕ್ಷೇತ್ರದ ಟಿಕೆಟ್ ಕೇಳಿದ್ದು, ವರಿಷ್ಠರು ಸಂಸದರಿಗೆ ಟಿಕೆಟ್ ಇಲ್ಲ ಎಂದು ಹೇಳಿದ್ದಾರೆ. ಕೊನೆಗೆ ತಮ್ಮ ಪುತ್ರ ಗವಿಸಿದ್ದಪ್ಪ ಕರಡಿಗೆ ಟಿಕೆಟ್ ನೀಡಿ ಎಂದಿದ್ದು, ಪುತ್ರನಿಗು ಕೂಡಾ ಟಿಕೆಟ್ ನೀಡಲು ವರಿಷ್ಠರು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಅಸಮಧಾನಗೊಂಡಿರುವ ಸಂಗಣ್ಣ ಕರಡಿ, ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ನಂತರ ಲೋಕಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಹಿನ್ನೆಲೆ ಇಂದು (ಏ.16) ಬೆಳಗ್ಗೆ 10.30ಕ್ಕೆ ಬೆಂಬಲಿಗರ ಸಭೆ ಕರೆದಿದ್ದು, ಸಭೆ ಬಳಿಕ ದೆಹಲಿಗೆ ತೆರಳಿ ಲೋಕಸಭಾ ಸ್ಪೀಕರ್ಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಇನ್ನು ಕರಡಿ ಸಂಗಣ್ಣ ಜೆಡಿಎಸ್ ಸೇರ್ಪಡೆ ಬಹುತೇಕ ಪಕ್ಕಾ ಆಗಿದ್ದು ಇಂದಿನ ಸಭೆ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ. ಒಂದು ವೇಳೆ ಜೆಡಿಎಸ್ ಸೇರ್ಪಡೆಯಾದರೇ ಏ.19ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಕರಡಿ ಸಂಗಣ್ಣ ನಡೆ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ರಾಘವೇಂದ್ರ ಹಿಟ್ನಾಳ ವಿರುದ್ಧ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 2013 ಮತ್ತು 2018 ರಲ್ಲಿ ಸತತವಾಗಿ ಪಕ್ಷ ಸೋಲು ಅನುಭವಿಸಿರುವುದರಿಂದ ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಅಳೆದು-ತೂಗಿ ನಿರ್ಣಯ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.