ಬೆಂಗಳೂರು: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ನಟ ಸಂಚಾರಿ ವಿಜಯ್ ಇಂದು ಮುಂಜಾನೆ ವಿಧಿವಶರಾಗಿದ್ದು, ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸ್ಯಾಂಡಲ್ವುಡ್ ನಟರು, ರಂಗಭೂಮಿ ಕಲಾವಿದರು, ಸಂಚಾರಿ ವಿಜಯ್ ಅವರ ಅಭಿಮಾನಿಗಳು ಸೇರಿದಂತೆ ನೂರಾರು ಮಂದಿ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ವಿಜಯ್ ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಅಂತಿಮ ದರ್ಶನ ಬಳಿಕ ವಿಜಯ್ ಪಾರ್ಥಿವ ಶರೀರ ಅವರ ಸ್ವಗ್ರಾಮ ಕಡೂರಿನ ಪಂಚೇನಹಳ್ಳಿಗೆ ರವಾನೆಯಾಗಲಿದ್ದು, ಸಂಜೆ ವೇಳೆಗೆ ವಿಜಯ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಈಗಾಗಲೇ ಪಂಚೇನಹಳ್ಳಿಯಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.