ಬೆಂಗಳೂರು: ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸೌಧದ ಸ್ಪೀಕರ್ ಕಚೇರಿಗೆ ತೆರಳಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿದ್ದಾರೆ. ರಾಜೀನಾಮೆ ನೀಡಿದ ನಂತರ ಮಾತನಾಡಿದ ಶ್ರೀನಿವಾಸ್, ನಾನು ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮಾರ್ಚ್ 31ಕ್ಕೆ ನಾನು ಅಧೀಕೃತ ವಾಗಿ ಕಾಂಗ್ರೆಸ್ ಸೇರುತ್ತೇನೆ. ಶಿವಲಿಂಗೇಗೌಡ ಎಟಿ ರಾಮಸ್ವಾಮಿ ಕೂಡ ಕಾಂಗ್ರೆಸ್ ಪಕ್ಷ ಸೇರುತ್ತಾರೆ. ಗುಬ್ಬಿಯಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ಒಟ್ಟಾಗಿ ಇದ್ದಾರೆ. ಅವರ ಬೆಂಬಲದೊಂದಿಗೆ ಕಾಂಗ್ರೆಸ್ನಿಂದ ಕಣಕ್ಕಿಳಿದು ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ವಿಶ್ವಾಸ ಇದೆ ಎಂದರು.
ರಾಜೀನಾಮೆಗೂ ಮುನ್ನ ಮಾತನಾಡಿದ್ದ ಶ್ರೀನಿವಾಸ್, ತುಂಬಾ ದುಃಖದಿಂದ ಜೆಡಿಎಸ್ ಪಕ್ಷವನ್ನು ಬಿಡುತ್ತಿದ್ದೇನೆ. ದೇವೆಗೌಡರು ಮಗನಂತೆ ನೋಡಿಕೊಂಡಿದ್ದರು. ಕುಮಾರಸ್ವಾಮಿ ಮತ್ತು ನನ್ನ ಒಡನಾಟ ಸಾಕಷ್ಟು ಆತ್ಮೀಯವಾಗಿತ್ತು. ಅದರೆ ಕಳೆದ ಒಂದೂವರೆ ವರ್ಷದ ಹಿಂದೆ ಯಾರು ಏನು ಹೇಳಿದರೋ ಗೊತ್ತಿಲ್ಲ, ಹೊಸ ಅಭ್ಯರ್ಥಿ ಘೋಷಣೆ ಮಾಡಿದರು. ಅದರ ಉದ್ದೇಶ ನನಗೆ ಗೊತ್ತಗಲಿಲ್ಲ. ಅವರು ಅಭ್ಯರ್ಥಿ ಘೋಷಣೆ ಮಾಡಿದ ಮೇಲೆ ನಾನು ನನಗೆ ಗೌರವ ಇಲ್ಲದ ಸ್ಥಳದಿಂದ ಹೊರ ಬಂದಿದ್ದೆನೆ ಎಂದರು.
ಜೆಡಿಎಸ್ನಲ್ಲಿ 20 ವರ್ಷ ಕೆಲಸ ಮಾಡಿದ್ದೇನೆ. ಕೆಲಸ ಮಾಡಲು ಅವಕಾಶ ನೀಡಿದ ದೇವೇಗೌಡರಿಗೆ ಧನ್ಯವಾದ ಸಲ್ಲಿಸುವೆ. ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣಗೂ ಧನ್ಯವಾದ ಸಲ್ಲಿಸುವೆ. ನನ್ನ ಮತ್ತು ಅವರ ನಡುವೆ ಅಣ್ಣ ತಮ್ಮಂದಿರ ರೀತಿ ಒಡನಾಟವಿತ್ತು. ಆ ಪ್ರೀತಿ, ಒಡನಾಟ ಈಗ ಇಲ್ಲ. ನನಗೆ ಕೆಲಸ ಮಾಡಲು ಅವರು ಕೂಡ ಹೆಚ್ಚಿನ ಕೆಲಸ ಮಾಡಲು ಪಕ್ಷದಲ್ಲಿ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ. ಕುಮಾರಸ್ವಾಮಿಯವರು ನಾನು ಹೆಚ್ಚಿನ ಕೆಲಸ ಮಾಡಲು ಸಹಕಾರ ನೀಡಿದ್ದಾರೆ ಅವರಿಗೆ ಋಣಿಯಾಗಿರ್ತಿನಿ. ಅಭಿವೃದ್ಧಿ ವಿಚಾರದಲ್ಲೂ ಕೂಡ ಅವರು ಸಹಕಾರ ನೀಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಇರುವ ಶಾಸಕರು ಕೂಡ ಅಣ್ಣ ತಮ್ಮಂದಿರ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ನನ್ನ ಪಕ್ಷದಲ್ಲಿ ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಿದರು. ಆ ವಾತಾವರಣದಿಂದ ಹೊರಗೆ ಹೋಗಲು ನಮ್ಮ ಮನಸಿಗೂ ದುಃಖ ಆಗುತ್ತದೆ. ವಿಧಿಯಿಲ್ಲ ಅವರು ಹೊರಗೆ ಹಾಕಿದ್ದಾರೆ. ನಾನು ಹೋಗಲೇಬೇಕಾಗುತ್ತದೆ ಎಂದರು.
ಈಗಲಾದರೂ ನನ್ನ ಬಗ್ಗೆ ಒಳ್ಳೆಯ ಮಾತನಾಡಿದ್ದಾರಲ್ಲ ಅಷ್ಟೇ ಸಾಕು: ಕುಮಾರಸ್ವಾಮಿ ಶಾಸಕ ಗುಬ್ಬಿ ಶ್ರೀನಿವಾಸ್ ಅವರು ಕುಮಾರಸ್ವಾಮಿ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅದು ಮುಗಿದ ಕಥೆ ಬಿಡಿ, ಅವರು ಪಕ್ಷದಿಂದ ಏಕೆ ದೂರವಾದರು ಅನ್ನೋದಕ್ಕೆ ಹಳೆಯ ಅವರ ಹೇಳಿಕೆಗಳನ್ನು ನೋಡಿಕೊಳ್ಳಲಿ. ಈಗಲಾದರೂ ನನ್ನ ಬಗ್ಗೆ ಒಳ್ಳೆಯ ಮಾತನಾಡಿದ್ದಾರಲ್ಲ ಅಷ್ಟೇ ಸಾಕು. ನನ್ನ ಬಗ್ಗೆ ಒಳ್ಳೆಯ ಮಾತನಾಡಿದಕ್ಕೆ ಕೃತಜ್ಞತೆಗಳು ಎಂದರು