ಕೂಗು ನಿಮ್ಮದು ಧ್ವನಿ ನಮ್ಮದು

ಮೈಸೂರಿನಿಂದ ರಾಜಕೀಯ ಅಖಾಡಕ್ಕೆ ಧುಮುಕ್ತಾರಾ ರೋಹಿಣಿ ಸಿಂಧೂರಿ..!?

ಮೈಸೂರು: ರೋಹಿಣಿ ಸಿಂಧೂರಿಯನ್ನ ಮತ್ತೆ ಮೈಸೂರು ಡಿಸಿಯನ್ನಾಗಿ ನೇಮಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಕ್ಯಾಂಪೇನ್ ಶುರುವಾಗಿದೆ. ಸಿಂಧೂರಿ ಅಭಿಮಾನಿಗಳು ತಮ್ಮದೇ ಆದ ಶೈಲಿಯಲ್ಲಿ ಹಾಡಿ ಹೊಗಳುತ್ತಿದ್ದು, ಯೂಟ್ಯೂಬ್ ಫೇಸ್‌ಬುಕ್ ತುಂಬಾ ಸಿಂಧೂರಿಯದ್ದೆ ಚರ್ಚೆ. ಈ ನಡುವೆ ಮೈಸೂರು ಡಿಸಿಯನ್ನಾಗಿ ರೋಹಿಣಿ ಸಿಂಧೂರಿಯನ್ನ ನೇಮಿಸಿ, ಇಲ್ಲವೇ ನಾವು ಸಿಂಧೂರಿಯನ್ನ ಎಂಪಿಯನ್ನಾಗಿ ಮಾಡಿಕಳುಹಿಸ್ತೀವಿ ಎಂಬ ಮಾತುಗಳು ಕೇಳಿ ಬಂದಿವೆ. ಈ ಮೂಲಕ ಸಂಸದ ಪ್ರತಾಪ್‌ಸಿಂಹ ವಿರುದ್ದ ರೋಹಿಣಿ ಸಿಂಧೂರಿ ನಿಲ್ಲಬೇಕು ಎಂಬ ಚರ್ಚೆ ಶುರುವಾಗಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಈಗ ಇತಿಹಾಸ. ಆದ್ರೆ ಸಿಂಧೂರಿಯನ್ನೇ ಮತ್ತೆ ಮೈಸೂರು ಡಿಸಿಯನ್ನಾಗಿ ನೇಮಿಸುವ ಒತ್ತಾಯ ಭುಗಿಲೆದ್ದಿದೆ.‌ ಅದು ಯಾವ ಹಂತಕ್ಕೆ ಅಂದ್ರೆ ರೋಹಿಣಿ ಸಿಂಧೂರಿಯನ್ನ ಮೈಸೂರು ಡಿಸಿಯನ್ನಾಗಿ ನೇಮಿಸಿ, ಇಲ್ಲವೇ ನಾವೇ ಸಂಸತ್ ಸದಸ್ಯರನ್ನಾಗಿ ನಾವೇ ಆಯ್ಕೆ ಮಾಡಿ ಕಳುಹಿಸುತ್ತೇವೆ ಎಂಬ ಎಚ್ಚರಿಕೆ ನೀಡುವ ಹಂತಕ್ಕೆ ತಲುಪಿದೆ. ಭೂ ಮಾಫಿಯಾ ವಿರುದ್ದ ಸಿಡಿದೆದ್ದಿದ್ದ ರೋಹಿಣಿ ಸಿಂಧೂರಿಯನ್ನ ವರ್ಗಾವಣೆ ಮಾಡಿದ ಬೆನ್ನಲ್ಲೇ ವಿವಿಧ ಸಂಘಟನೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಿಂಧೂರಿ ಅಭಿಮಾನಿಗಳು ರೋಹಿಣಿ ಪರ ಬ್ಯಾಟ್ ಬೀಸುತ್ತಿದ್ದಾರೆ.

ಇನ್ನು ಸಿಂಧೂರಿ ಅಭಿಮಾನಿಗಳು ಸಂಸದ ಪ್ರತಾಪ್‌ಸಿಂಹ ಅವರುಗೆ ಸೆಡ್ಡು ಹೊಡೆಯುತ್ತಿದ್ದು, ರಾಜಕಾರಣಿಗಳನ್ನ ರಾಜಕೀಯವಾಗಿ ಸೆಡ್ಡು ಹೊಡೆಯುವಂತೆ ಮುಂದಿನ ಲೋಕಸಭಾ ಚುನಾವಣೆಗೆ ಮೈಸೂರಿನಿಂದ ರೋಹಿಣಿ ಸ್ಪರ್ಧಿಸಬೇಕೆಂದು ಮನವಿ ಮಾಡಿದ್ದಾರೆ. ಸಂಸದ ಪ್ರತಾಪ್‌ಸಿಂಹ ವಿರುದ್ಧ ಸ್ಪರ್ಧಿಸಿದ್ರೆ ನಾವೆಲ್ಲರೂ ಹೋರಾಡಿ ಗೆಲ್ಲಿಸ್ತೀವಿ ಎನ್ನುವ ಪೋಸ್ಟ್‌ಗಳು ವೈರಲ್‌ ಆಗುತ್ತಿವೆ. ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ದೇಶ ಉದ್ದಾರ ಅಗೋದು, ಮೈಸೂರಿನಲ್ಲಿ ಪ್ರತಾಪ್‌ಸಿಂಹ ವಿರುದ್ಧ ರೋಹಿಣಿ ಸಿಂಧೂರಿ ಸ್ಪರ್ಧಿಸಿದ್ರೆ ನಮ್ಮ ಬೆಂಬಲ ಇರುತ್ತೆ ಎಂದು ಕೆಲವರು ಪೋಸ್ಟ್ ಮಾಡಿರುವ ಫೋಟೋಗಳು ವೈರಲ್ ಆಗ್ತಿವೆ.

ಈ ನಡುವೆ ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ ಎಂಬ ಅಭಿಯಾನ ದಾಖಲೆ ಮುಟ್ಟುವತ್ತ ಹೆಜ್ಜೆ ಹಾಕ್ತಿದೆ. ಈಗಾಗಲೇ 1ಲಕ್ಷದ 65 ಸಾವಿರ ಮಂದಿ ಬೆಂಬಲ ಸೂಚಿಸಿದ್ದು, ಈ ಮೂಲಕ ಸಿಂಧೂರಿ ವರ್ಗಾವಣೆ ರದ್ದು ಮಾಡುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರೋಹಿಣಿಯನ್ನ ರಾಜಕೀಯಕ್ಕೆ ಆಹ್ವಾನಿಸಿರೋದು, ಅದರಲ್ಲೂ ಮೈಸೂರಿನಿಂದಲೇ ಸ್ಪರ್ಧಿಸಬೇಕೆಂಬ ಪೋಸ್ಟ್‌ಗಳು ನಾನಾ ಚರ್ಚೆಯನ್ನು ಹುಟ್ಟುಹಾಕಿವೆ.

error: Content is protected !!