ಕೂಗು ನಿಮ್ಮದು ಧ್ವನಿ ನಮ್ಮದು

ಮುಖ್ಯ ಕಾರ್ಯದರ್ಶಿ ಅಂಗಳ ತಲುಪಿದ ಐಎಎಸ್ vs ಐಪಿಎಸ್ ಅಧಿಕಾರಿಗಳ ಜಗಳ: ಸಿಎಸ್‌ ಭೇಟಿಯಾದ ರೋಹಿಣಿ ಸಿಂಧೂರಿ

ಬೆಂಗಳೂರು: ಐಜಿಪಿ ಡಿ. ರೂಪಾ ಮೌದ್ಗಿಲ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಆರೋಪ ಹಾಗೂ ವೈಯಕ್ತಿಕ ಫೋಟೊಗಳ ಕುರಿತು ನಿನ್ನೆಯಿಂದ ಜಗಳ ಶುರುವಾಗಿದೆ. ನಿನ್ನೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಇಂದು ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿಯಾಗಿ ದೂರು ನೀಡಲು ಮುಂದಾಗಿದ್ದಾರೆ.

ಈಗಾಗಲೇ ದೇಶಾದ್ಯಂತ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ಒಳಜಗಳ ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ವೈರಲ್‌ ಆಗಿದ್ದು, ಎಲ್ಲರೂ ಕರ್ನಾಟಕದ ಅಧಿಕಾರಿಗಳ ಜಗಳದತ್ತ ಚಿತ್ತ ನೆಟ್ಟಿದ್ದಾರೆ. ನಿನ್ನೆ ಐಜಿಪಿ ಡಿ. ರೂಪಾ ಮೌದ್ಗಿಲ್‌ ಅವರು ಬೆಳಗ್ಗೆ 19 ಪ್ರಶ್ನೆಗಳನ್ನು ಹಾಕುವ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು. ನಂತರ, ರೋಹಿಣಿ ಸಿಂಧೂರಿ ಅವರ ತೀವ್ರ ಖಾಸಗಿ ಚಿತ್ರಗಳನ್ನು ಹರಿಬಿಟ್ಟಿದ್ದರು. ಇಂತಹ ಖಾಸಗಿ ಚಿತ್ರಗಳನ್ನು ಕೆಲ ಐಎಎಸ್‌ ಅಧಿಕಾರಿಗಳಿಗೆ ಕಳಿಸಿರುವ ಬಗ್ಗೆ ಹಾಗೂ ಡಿ.ಕೆ. ರವಿ ಅವರ ಸಾವಿನ ಬಗ್ಗೆ ತನಿಖೆಯಾಗಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು.

ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದ ಸಿಂಧೂರಿ: ಇದಾದ ಬೆನ್ನಲ್ಲೇ ಸಂಜೆ ವೇಳೆ ತಿರುಗೇಟು ನೀಡಿದ್ದ ರೋಹಿಣಿ ಸಿಂಧೂರಿ ಅವರು ರೂಪಾ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಲಿ. ಅವರು ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ ಕೆಲಸದ ವಿಚಾರದ ಬಗ್ಗೆ ಯಾವುಯದಾದರೂ ವಿಚಾರವನ್ನು ಮಾತನಾಡಲಿ. ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದರೆ ನಾನು ಸಹಿಸಲ್ಲ. ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ. ಇದನ್ನು ಬಿಡುವುದಿಲ್ಲ. ಕಾನೂನು ಹೋರಾಟ ಮಾಡುವೆ. ನನ್ನ ಬಗ್ಗೆ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ಇದು ಸರಿಯಾದ ವೇದಿಕೆಯಲ್ಲ ಎಂದು ಹೇಳಿದ್ದರು.
ಮುಖ್ಯ ಕಾರ್ಯದರ್ಶಿಜೊತೆ ಚರ್ಚೆ: ನಿನ್ನೆಯಿಂದ ಡಿ. ರೂಪಾ ಅವರು ಮಾಡುತ್ತಿದ್ದ ಆರೋಪಗಳ ಸುರಿಮಳೆ ಹಾಗೂ ಇಬ್ಬರ ಜಗಳ ಇಂದು ಅತಿರೇಕಕ್ಕೆ ಏರಿದೆ. ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ ಅವರು ಪೊಲೀಸರಿಗೆ ದೂರು ದಾಖಲಸಿದ್ದಾರೆ. ಈ ಬಗ್ಗೆ ಪುನಃ ಪ್ರತಿಕ್ರಿಯೆ ನೀಡಿದ್ದ ರೂಪಾ ಅವರು, ನಗ್ನ ಚಿತ್ರಗಳನ್ನು ಕಳುಹಿಸಿ ಡಿಲೀಟ್‌ ಮಾಡಿದ್ದಾರೆನ್ನಲ್ಲಾದ ರೋಹಿಣಿ ಸಿಂಧೂರಿ ಅವರ ವಾಟ್ಸಾಪ್‌ ಚಾಟಿಂಗ್‌ ಫೋಟೋಗಳ ಸ್ಕ್ರೀನ್‌ ಶಾಟ್‌ಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ರೋಹಿಣಿ ಸಿಂಧೂರಿ ಅವರು, ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಲು ಹೋಗಿದ್ದಾರೆ. ಅಲ್ಲಿ ಅವರೊಂದಿಗೆ ಚರ್ಚಿಸಿ ಕಾನೂನು ಕ್ರಮಕ್ಕೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

error: Content is protected !!