ನವದೆಹಲಿ: ದೀಪಾವಳಿಯ ವೇಳೆ ಭಾರತೀಯರು ಪಟಾಕಿ ಸಿಡಿಸಿ ಸಂಭ್ರಮಿಸಲು ಸಜ್ಜಾಗಿದ್ದರೆ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಕೂಡ ಇದನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡಲು ಅಣಿಯಾಗಿದೆ. ದೀಪಾವಳಿಯ ಒಂದು ದಿನ ಮುನ್ನ ಇಸ್ರೋ ತಮ್ಮ ಈವರೆಗಿನ ಅತ್ಯಂತ ಭಾರದ ರಾಕೆಟ್‌ಅನ್ನು ಉಡಾವಣೆ ಮಾಡಲಿದೆ. ಬ್ರಿಟಿಷ್ ಸ್ಟಾರ್ಟ್‌ಅಪ್ ಕಂಪನಿ ಒನ್ ವೆಬ್‌ನ ಸ್ಯಾಟಲೈಟ್‌ಗಳನ್ನು ಈ ರಾಕೆಟ್‌ಗಳು ಹೊತ್ತೊಯ್ಯಲ್ಲಿದ್ದು, ಕಕ್ಷೆಗೆ ಸೇರಿಸುವ ಗುರಿಯನ್ನು ಹೊಂದಿದೆ. ಈ ಸ್ಯಾಟಲೈಟ್‌ಗಳ ಮೂಲಕ ಇಡೀ ವಿಶ್ವಕ್ಕೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಗುರಿಯನ್ನು ಸ್ಟಾರ್ಟ್‌ಅಪ್ ಕಂಪನಿ ಹೊಂದಿದೆ. ಈ ಕಂಪನಿಯಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸ್ ಕಂಪನಿ ಆಫ್ ಇಂಡಿಯಾ ಕೂಡ ಷೇರು ಹೊಂದಿದೆ. ಈ ಕಂಪನಿಯು ಭಾರತದಲ್ಲಿ ಟೆಲಿಕಾಂ ಕಂಪನಿ ಏರ್‌ಟೆಲ್‌ನ ಮಾಲೀಕತ್ವವನ್ನು ಹೊಂದಿದೆ. ಇಸ್ರೋದ ಈ ರಾಕೆಟ್‌ನ ಹೆಸರು ಲಾಂಚ್ ವೆಹಿಕಲ್ ಮಾರ್ಕ್-3. ಇದನ್ನು ಮೊದಲು ಜಿಯೋಸಿಂಕ್ರೊನಸ್ ಲಾಂಚ್ ವೆಹಿಕಲ್ ಮಾರ್ಕ್-3 ಎಂದು ಕರೆಯಲಾಗುತ್ತಿತ್ತು. ಒನ್‌ವೆಬ್‌ನ 36 ಉಪಗ್ರಹಗಳು ಈ ರಾಕೆಟ್‌ನಲ್ಲಿ ಇರಲಿದೆ. ಸಂಪೂರ್ಣ ಮಿಷನ್‌ನ ಹೆಸರು ಎಲ್‌ವಿಎಂ3-ಎಂ2/ಒನ್‌ವೆಬ್ ಇಂಡಿಯಾ-1 ಮಿಷನ್ ಆಗಿದೆ.
ಶ್ರೀಹರಿಕೋಟಾದ ಬಾಹ್ಯಾಕಾಶ (LVM3-M2/OneWeb India-1 Mission) ನಿಲ್ದಾಣದಿಂದ ಅಕ್ಟೋಬರ್ 23ರಂದು ಬೆಳಗ್ಗೆ 7 ಗಂಟೆಗೆ ಉಡಾವಣೆಯಾಗಲಿದೆ. ಇಸ್ರೋ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ರಾಕೆಟ್‌ನ ಕ್ರಯೋಜೆನಿಕ್ ಹಂತ ಹಾಗೂ ಉಪಕರಣಗಳ ಜೋಡಣೆಯ ಹಂತ ಈಗಾಗಲೇ ಸಂಪೂರ್ಣವಾಗಿದೆ. ರಾಕೆಟ್‌ನ ಮುಂಭಾಗದಲ್ಲಿ ಎಲ್ಲಾ 36 ಸ್ಯಾಟಲೈಟ್‌ಗಳ ಜೋಡಣೆ ಮಾಡಲಾಗಿದ್ದು, ಅಂತಿಮ ಹಂತದ ತನಿಖೆಗಳು ನಡೆಯುತ್ತಿವೆ. ಒನ್‌ವೆಬ್‌ನೊಂದಿಗೆ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ, ಒನ್‌ವೆಬ್‌ನ ಉಪಗ್ರಹಗಳನ್ನು ಎರಡು ಬಾರಿ ಇಸ್ರೋ ಉಡಾವಣೆ ಮಾಡಲಿದೆ. ಅಕ್ಟೋಬರ್ 23 ರಂದು ಮೊದಲ ಉಡಾವಣೆಯಾಗಿರಲಿದ್ದರೆ, 2ನೇ ಉಡಾವಣೆ ನಂತರದ ದಿನಗಳಲ್ಲಿ ನಿರ್ಧಾರವಾಗಲಿದೆ. ಬಹುಶಃ ಮುಂದಿನ ವರ್ಷದ ಜನವರಿಯಲ್ಲಿ ನಡೆಯಬಹುದು ಎನ್ನಲಾಗಿದೆ. ಈ ಉಪಗ್ರಹಗಳನ್ನು ಭೂ ಕಕ್ಷೆಯ ಸಮೀಪದಲ್ಲಿ ನಿಯೋಜನೆ ಮಾಡಲಾಗುತ್ತದೆ. ಇವು ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳು. ಇವರ ಹೆಸರು ಒನ್‌ವೆಬ್ ಲಿಯೋ ಆಗಿದೆ. ಇದು ಎಲ್‌ವಿಎಂ3 ರಾಕೆಟ್‌ನ ಮೊದಲ ವಾಣಿಜ್ಯ ಹಾರಾಟವಾಗಿದೆ.
2019 ರಲ್ಲಿ, ಚಂದ್ರಯಾನ-2 (ಚಂದ್ರಯಾನ-2), 2018 ರಲ್ಲಿ ಜಿಸ್ಯಾಟ್-2, 2017 ರಲ್ಲಿ ಜಿಸ್ಯಾಟ್-1 ಮತ್ತು ಅದಕ್ಕೂ ಮೊದಲು 2014 ರಲ್ಲಿ ಕ್ರ್ಯೂ ಮಾಡ್ಯೂಲ್ ವಾಯುಮಂಡಲದ ಮರು-ಪ್ರವೇಶ ಪ್ರಯೋಗ (CARE) ನಡೆಸಿತು. ಈ ಎಲ್ಲಾ ಕಾರ್ಯಾಚರಣೆಗಳು ದೇಶಕ್ಕೆ ಹಾಗೂ ಸರ್ಕಾರದ ಕಾರ್ಯಕ್ರಮವಾಗಿತ್ತು. ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯ ಉಪಗ್ರಹ ಈ ರಾಕೆಟ್‌ನಲ್ಲಿ ಹೋಗುತ್ತಿದೆ. ಈ ರಾಕೆಟ್‌ನಿಂದ ಇಲ್ಲಿಯವರೆಗೆ ನಾಲ್ಕು ಉಡಾವಣೆಗಳನ್ನು ಮಾಡಲಾಗಿದೆ. ನಾಲ್ಕೂ ಯಶಸ್ವಿಯಾಗಿದ್ದು, ಇದು ಐದನೇ ಉಡಾವಣೆ ಎನಿಸಿದೆ. ಎಲ್‌ವಿಎಂ3 ರಾಕೆಟ್ ಸಹಾಯದಿಂದ, 4 ಟನ್‌ಗಳಷ್ಟು, ಅಂದರೆ 4000 ಕೆಜಿ ತೂಕದ ಉಪಗ್ರಹಗಳನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್ (GTO) ಗೆ ಸಾಗಿಸಬಹುದು. ಈ ರಾಕೆಟ್ ಮೂರು ಹಂತಗಳನ್ನು ಹೊಂದಿದೆ. ಎರಡು ಘನ ಮೋಟಾರ್‌ಗಳನ್ನು ಇದಕ್ಕೆ ಜೋಡಿಸಲಾಗಿದೆ. ಸಾಮಾನ್ಯವಾಗಿ ಈ ರಾಕೆಟ್ ಉಡಾವಣೆ ಮಾಡಲು ಸುಮಾರು ನಾನೂರು ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಈ ರಾಕೆಟ್‌ನ ಉದ್ದ 142.5 ಅಡಿ. ವ್ಯಾಸ 13 ಅಡಿ. ಇದರ ಒಟ್ಟು ತೂಕ 6.40 ಲಕ್ಷ ಕೆ.ಜಿ ಆಗಿದೆ.
ಎಲ್‌ವಿಎಂ3 (LVM3) ಸಹಾಯದಿಂದ, ಜಿಟಿಓನಲ್ಲಿ ಉಪಗ್ರಹಗಳನ್ನು ನಿಯೋಜಿಸಬೇಕಾದರೆ, 4 ಟನ್‌ಗಳಷ್ಟು ತೂಕದ ಉಪಗ್ರಹಗಳನ್ನು ಸಾಗಿಸಬಹುದು. ಉಪಗ್ರಹಗಳನ್ನು ಭೂಮಿಯ ಸಮೀಪದ ಕಕ್ಷೆಗೆ ಸೇರಿಸಬೇಕಾದರೆ, 10 ಸಾವಿರ ಕಿಲೋಗ್ರಾಂಗಳಷ್ಟು ಉಪಗ್ರಹಗಳನ್ನು ಸಾಗಿಸಬಹುದು. ಈ ರಾಕೆಟ್ ಸಹಾಯದಿಂದ ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚಂದ್ರಯಾನ-3 (Chandrayan 3) ಉಡಾವಣೆ ಮಾಡುವ ಯೋಜನೆ ಇದೆ. ಅಷ್ಟೇ ಅಲ್ಲ, ಮುಂದಿನ ವರ್ಷದ ಅಂತ್ಯದ ವೇಳೆಗೆ ಗಗನ್‌ಯಾನ್‌ನ ಮೊದಲ ಮಾನವರಹಿತ ಹಾರಾಟವನ್ನು ಈ ರಾಕೆಟ್‌ನ ಮಾರ್ಪಡಿಸಿದ ಆವೃತ್ತಿಯೊಂದಿಗೆ ಪರೀಕ್ಷಿಸಬಹುದಾಗಿದೆ.