ಕೂಗು ನಿಮ್ಮದು ಧ್ವನಿ ನಮ್ಮದು

ಚನ್ನರಾಜ್ ಹಟ್ಟಿಹೊಳಿ ಆಯ್ಕೆಯಿಂದ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ: ಸತೀಶ್ ಜಾರಕಿಹೊಳಿ

ಚನ್ನಮ್ಮನ ಕಿತ್ತೂರು: ಡಿಸೆಂಬರ್ 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರವಾಗಿ ಕಿತ್ತೂರಿನಲ್ಲಿ ಶುಕ್ರವಾರ ಸಂಜೆ ಪಂಚಾಯಿತಿ ಪ್ರತಿನಿಧಿಗಳ ಸಮಾವೇಶ ನಡೆಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಜಿಲ್ಲಾಧ್ಯಕ್ಷರಾದ ವಿನಯ ನಾವಲಗಟ್ಟಿ, ಲಕ್ಷ್ಮಣರಾವ್ ಚಿಂಗಳೆ, ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮೊದಲಾದವರು ಭಾಗವಹಿಸಿದ್ದರು. ಸತೀಶ್ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಯುವಕರಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರನ್ನು ಆಯ್ಕೆ ಮಾಡಿದಲ್ಲಿ ಪಕ್ಷ ಬಲಗೊಳ್ಳುವುದಲ್ಲದೆ ಪಂಚಾಯತ್ ರಾಜ್ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ಬರಲಿದೆ ಎಂದರು.‌

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಪಂಚಾಯಿತಿ ರಾಜ್ಯ ವ್ಯವಸ್ಥೆ ಅಸ್ಥಿತ್ವಕ್ಕೆ ಬರುವುದಕ್ಕೆ, ಅದು ಪ್ರಬಲವಾಗಿ ಉಳಿಯುವುದಕ್ಕೆ ಕಾಂಗ್ರೆಸ್ ಪಕ್ಷ ಕಾರಣ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಈ ವ್ಯವಸ್ಥೆಯಲ್ಲಿ ಭಾಗಿಯಾಗುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ವ್ಯವಸ್ಥೆಯ ಇನ್ನಷ್ಟು ಸುಧಾರಣೆಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತನೀಡಬೇಕು. ಮೊದಲ ಪ್ರಾಶಸ್ತ್ಯದ ಮತದ ಮೂಲಕ ಚನ್ನರಾಜ ಹಟ್ಟಿಹೊಳಿ ಅವರನ್ನು ಆರಿಸಿ ತರಬೇಕು ಎಂದು ಮನವಿ ಮಾಡಿದರು.

ಈ ವಿಧಾನ ಪರಿಷತ್ ಚುನಾವಣೆ ಸತೀಶ್ ಜಾರಕಿಹೊಳಿಯವರ ನೇತೃತ್ವ ಹಾಗೂ‌ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಪಕ್ಷ ಮತ್ತಷ್ಟು ಗಟ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ರಾಜ್ಯದ ಹಿರಿಯ ನಾಯಕರಾಗಿದ್ದು, ಸಾಕಷ್ಟು ಅನುಭವ ಅವರಲ್ಲಿದೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದು ಹೆಬ್ಬಾಳಕರ್ ಹೇಳಿದರು. ಬೆಳಗಾವಿ ಜಿಲ್ಲೆಯಲ್ಲಿ ಒಂದು ಸ್ಥಾನಕ್ಕಾಗಿ ಮಾತ್ರ ಸ್ಪರ್ಧಿಸಲು ಕಾಂಗ್ರೆಸ್ ತೀರ್ಮಾನಿಸಿದ್ದು, ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ವಿಶ್ವಾಸ, ಆಶೀರ್ವಾದ ನನ್ನ ಹಾಗೂ ಪಕ್ಷದ ಮೇಲಿರಲಿ ಎಂದು ಚನ್ನರಾಜ ಹಟ್ಟಿಹೊಳಿ ಕೋರಿದರು.

ಕಿತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ ಚುನಾಯಿತ ಜನ ಪ್ರತಿನಿಧಿಗಳು, ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ವಿನಯ ನಾವಲಗಟ್ಟಿ, ಲಕ್ಷ್ಮಣರಾವ್ ಚಿಂಗಳೆ, ಸಂಗನಗೌಡ ಪಾಟೀಲ, ನಿಂಗಪ್ಪ ಅರಿಕೇರಿ, ಸಣ್ಣಪ್ಪ ರಾಮರಾವ್, ರಾಜೇಂದ್ರ ಇನಾಮದಾರ, ರಮೇಶ ಮೊಕಾಶಿ, ಬಾಬಾಸಾಹೇಬ ಪಾಟೀಲ, ಸೈಯದ್ ಮನ್ಸೂರ್, ಮುದಕಪ್ಪ ಮರಡಿ, ಪಿ ಕೆ ನೀರಲಕಟ್ಟಿ, ಅಬ್ದುಲ್ ಮುಲ್ಲಾ, ಗುಲಾಬ್ ಬಾಳೇಕುಂದ್ರಿ, ರವಿ ನಾವಲಗಿ, ಕುಮಾರ ಹಿರೇಮಠ ಹಾಗೂ ಮುಂತಾದವರು ಉಪಸ್ಥಿತರಿದ್ದರು.

error: Content is protected !!