ಕೂಗು ನಿಮ್ಮದು ಧ್ವನಿ ನಮ್ಮದು

ಕೇಂದ್ರ, ರಾಜ್ಯ ಸರಕಾರಕ್ಕೆ ಮತದ ಮೂಲಕ ತಕ್ಕ ಉತ್ತರ ನೀಡಿ: ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮರಿ ಗ್ರಾಮದ ವಿವಿಧ ಸಂಘಟನೆಗಳ ಜೊತೆ ಬೆಳಗಾವಿ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಯವರ ಪರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಪ್ರಚಾರ ನಡೆಸಿದರು. ದೇಶದ ಈ‌ಗಿನ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರ ಬಗ್ಗೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳಿಗೆ ಕಿಂಚಿತ್ತೂ ಕಾಳಜಿ‌ ಇಲ್ಲ. ಪ್ರತಿಯೊಬ್ಬರೂ ಮತದ ಮೂಲಕ ಈ ಸರಕಾರಗಳಿಗೆ ತಕ್ಕ ಉತ್ತರ ನೀಡಬೇಕಿದೆ. ಈ ಸರ್ಕಾರಗಳು ಅಚ್ಛೇ ದಿನ್ ಎನ್ನುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲಿ ನಿರತವಾಗಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಬಡವರ‌ ಮೇಲೆ ಬರೆ ಎಳೆಯುತ್ತಿವೆ ಎಂದು ಹೆಬ್ಬಾಳಕರ್ ಹೇಳಿದರು.

ಬಡವರ, ಶ್ರಮಿಕರ ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲದ ಈ‌ ಸರ್ಕಾರಗಳಿಗೆ ಜನರೇ ಉತ್ತರಿಸಲಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ಸಾಗಿಸಲಿಕ್ಕೆ ಜನರು ಹರ ಸಾಹಸ ಪಡುತ್ತಿದ್ದಾರೆ. ಮೊದಲು ಬೆಲೆ ನಿಯಂತ್ರಿಸಿ ನಿಮ್ಮ ಅಚ್ಛೇದಿನ್ ಶಪಥ ಪೂರೈಸಿ ಎಂದು ಅವರು ಬಿಜೆಪಿ ಸರಕಾರವನ್ನು ಆಗ್ರಹಿಸಿದರು. ಭಾರತದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕರಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಜೊತೆಗೆ ಭಾರತದ ಸಂವಿಧಾನ ರಚನೆಯಲ್ಲಿ ಗಣನೀಯ ಕೊಡುಗೆ ನೀಡಿದ ಅಂಬೇಡ್ಕರ್ ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಸತೀಶ್ ಜಾರಕಿಹೊಳಿ ಅವರನ್ನು ಲೋಕಸಭೆಗೆ ಪ್ರಚಂಡ ಬಹುಮತಗಳಿಂದ ಆರಿಸಿ ತರೋಣ ಎಂದು ಹೇಬ್ಬಾಳಕರ್ ವಿನಂತಿಸಿದರು.

error: Content is protected !!