ದಾವಣಗೇರೆ: ನಾವು ಸಾಮಾನ್ಯವಾಗಿ ಮನುಷ್ಯರು ಹುಟ್ಟು ಹಬ್ಬ ಆಚರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಾಲೀಕ ತನ್ನ ಹೋರಿಯ ಹುಟ್ಟು ಹಬ್ಬವನ್ನ ಕೇಕ್ ಕಟ್ ಮಾಡುವ ಮೂಲಕ ಅದ್ಧೂರಿಯಾಗಿ ಆಚರಣೆ ಮಾಡಿದ್ದಾನೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿಯಲ್ಲಿ ಈ ಘಟನೆ ನಡೆದಿದ್ದು, ಇದರಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ಭಾಗಿಯಾಗಿ ಅವರೇ ಹೋರಿಗೆ ಕೇಕ್ ಕಟ್ ಮಾಡಿದ್ದಾರೆ.
ಇಂದು ಹೋರಿಯ ಜನ್ಮ ದಿನ ಹಿನ್ನಲೆಯಲ್ಲಿ ಅದಕ್ಕೆ ಹೊಸ ಹೊದಿಕೆ ಹಾಕಿ ಅದ್ಧೂರಿಯಾಗಿ ಸಿಂಗಾರ ಮಾಡಿದ್ದು, ಮಾಲೀಕ ಹಾಗೂ ಗೆಳೆಯರೆಲ್ಲ ಸೇರಿ ತಮ್ಮಂತೆಯೇ ಕೇಕ್ ಕಟ್ ಮಾಡಿ ಹುಟ್ಟು ಆಚರಣೆ ಮಾಡಿದ್ದಾರೆ. ಈ ಹೋರಿ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಕೊಬ್ಬರಿ ಹೋರಿ ತೀರ್ಥಗಿರಿ ಡಾನ್ ಎಂತಲೇ ಹೆಸರಾಗಿದ್ದು, ಕೊಬ್ಬರಿ ಸ್ಪರ್ಧೇಯಲ್ಲಿ ಖ್ಯಾತಿ ಪಡೆದಿದೆ. ಅಲ್ಲದೇ, ಕಳೆದ 14 ವರ್ಷಗಳಿಂದ ಯಾರ ಕೈಗೂ ಕೊಬ್ಬರಿ ಕೀಳಲು ಸಿಗದೇ ಹೆಸರು ಮಾಡಿದೆ. ಈ ಹಿನ್ನಲೆಯಲ್ಲಿ ಹೋರಿಯನ್ನು ಕೊಬ್ಬರಿ ಹೋರಿ ತೀರ್ಥಗಿರಿ ಡಾನ್ ಎಂಥಲೇ ಕರೆಯಲಾಗುತ್ತಿದೆ.
ಕೊಬ್ಬರಿ ಸ್ಪರ್ಧೇ ಹಾಗೂ ಹೋರಿ ಬೆದರಿಸುವ ಸ್ಫರ್ಧೆಗಳಲ್ಲಿ ಭಾಗವಹಿಸಿ ಮಾಲೀಕ ಮಂಜುನಾಥನಿಗೆ ಸಾಕಷ್ಟು ಬಹುಮಾನಗಳನ್ನು ತಂದು ಕೊಟ್ಟಿದೆ. ಹೀಗಾಗಿ, ಇಂದು ಮಂಜುನಾಥ ತನ್ನ ಹೋರಿಯ ಹುಟ್ಟು ಹಬ್ಬ ಆಚರಣೆ ಮಾಡಿದ್ದಾನೆ. ಬಳಿಕ, ಹೋರಿ ಹುಟ್ಟುಹಬ್ಬದ ಪೋಟೋ ಶೂಟ್ ಕೂಡ ಮಾಡಿಸಿದ್ದಾನೆ. ಈ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೇಕ್ ಕತ್ತರಿಸಿದ್ದು, ಹೋರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ.