ಕೂಗು ನಿಮ್ಮದು ಧ್ವನಿ ನಮ್ಮದು

RCB ತಂಡಕ್ಕೆ ಮುಖ್ಯ ಕೋಚ್ ನೇಮಕ; ಸಹಾಯಕ ಸಿಬ್ಬಂದಿ ವರ್ಗದಲ್ಲಿ ಯಾರ್ಯಾರಿದ್ದಾರೆ ಗೊತ್ತಾ?

ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಆಸ್ಟ್ರೇಲಿಯಾದ ಬೆನ್ ಸಾಯರ್ ಅವರು ಆರ್ಸಿಬಿ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸದ್ಯ ನ್ಯೂಜಿಲೆಂಡ್ ಮಹಿಳಾ ತಂಡದ ಕೋಚ್ ಜವಾಬ್ದಾರಿ ಹೊತ್ತಿರುವ 45 ವರ್ಷದ ಬೆನ್ ಸಾಯರ್ ಆರ್ಸಿಬಿ ಮಹಿಳಾ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂದು ಕಾದುನೋಡಬೇಕಾಗಿದೆ. ಬೆನ್ ಸಾಯರ್, ಮಹಿಳಾ ಬಿಗ್ ಬ್ಯಾಷ್‌ನಲ್ಲಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸುವುದರ ಜೊತೆಗೆ, ಅವರು ದಿ ಹಂಡ್ರೆಡ್‌ನಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್‌ ತಂಡಕ್ಕೂ ತರಬೇತಿ ನೀಡಿದ್ದರು.

ಮೂರು ವಿಶ್ವಕಪ್ ಗೆಲ್ಲಿಸಿಕೊಟ್ಟವರಿಗೆ ಮುಖ್ಯ ಕೋಚ್ ಹುದ್ದೆ
ಆಸ್ಟ್ರೇಲಿಯಾ ಮಹಿಳಾ ತಂಡ ಮೂರು ವಿಶ್ವಕಪ್ ಗೆಲ್ಲುವಲ್ಲಿ ಬೆನ್ ಸಾಯರ್ ಪಾತ್ರ ಅಪಾರವಾಗಿದೆ. ಇದೀಗ ಬೆನ್ ಸಾಯರ್ ಅವರನ್ನು ತನ್ನ ತಂಡಕ್ಕೆ ಆಯ್ಕೆ ಮಾಡಿರುವ ಆರ್‌ಸಿಬಿ, ಈ ವಿಷಯವನ್ನು ವಿಡಿಯೋ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ, ಬೆನ್ ಕಳೆದ 20 ವರ್ಷಗಳಿಂದ ಮಹಿಳಾ ಕ್ರಿಕೆಟ್‌ನೊಂದಿಗೆ ಸಂಬಂಧ ಹೊಂದಿದ್ದು, ಈ ಆಟದ ಬಗ್ಗೆ ಅವರಿಗೆ ಎಲ್ಲವೂ ತಿಳಿದಿದೆ. ಆಟಗಾರರನ್ನು ಅರ್ಥಮಾಡಿಕೊಳ್ಳಲು ಅವರು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹರಾಜಿನಲ್ಲಿ ಆಟಗಾರರ ಆಯ್ಕೆಯಲ್ಲೂ ಬೆನ್ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ತಿಳಿಸಿದೆ.

ಸಹಾಯಕ ಸಿಬ್ಬಂದಿ ವರ್ಗ ಹೀಗಿದೆ
ಇನ್ನು ಈ ಮಹಿಳಾ ಐಪಿಎಲ್‌ನಲ್ಲಿ ಮಲೋರನ್ ರಂಗರಾಜನ್, ವಿಆರ್ ವನಿತಾ ಮತ್ತು ಆರ್‌ಎಕ್ಸ್ ಮುರಳಿ ಬೆನ್ ಅವರಿಗೆ ಸಹಾಯಕ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಇವಲ್ಲದೆ, ತಂಡದ ವ್ಯವಸ್ಥಾಪಕರಾಗಿ ಡಾ.ಹರಣಿ ಆಯ್ಕೆಯಾಗಿದ್ದು, ತಂಡದ ವೈದ್ಯರಾಗಿ ನವನೀತ ಗೌತಮ್ ಅವರನ್ನು ಆಯ್ಕೆ ಮಾಡಿರುವುದಾಗಿ ಆರ್‌ಸಿಬಿ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವರದಿ ಮಾಡಿದೆ.

ಈ ಬಾರಿಯ ಮಹಿಳಾ ಐಪಿಎಲ್‌ನಲ್ಲಿ ಆರ್‌ಸಿಬಿ ಅತ್ಯಂತ ಬಲಿಷ್ಠ ತಂಡವನ್ನು ರಚಿಸಿದೆ. ಮಹಿಳಾ ಕ್ರಿಕೆಟ್‌ನ ಕೆಲವು ಪ್ರಸಿದ್ಧ ಮುಖಗಳನ್ನು ಭಾರಿ ಮೊತ್ತದ ಹಣಕ್ಕೆ ಆರ್ಸಿಬಿ ಖರೀದಿಸಿದೆ. ಅವರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ನ ಜನಪ್ರಿಯ ಮುಖವಾದ ಸ್ಮೃತಿ ಮಂಧಾನ ಅವರನ್ನು 3.4 ಕೋಟಿ ದಾಖಲೆ ಬೆಲೆಗೆ ಖರೀದಿಸಿದೆ. ಇವರಲ್ಲದೇ ಆಸ್ಟ್ರೇಲಿಯಾದ ಎಲಿಸ್ ಪೆರ್ರಿ ಹಾಗೂ ಮೇಗನ್ ಕೂಡ ತಂಡದಲ್ಲಿದ್ದಾರೆ.

ಮೊದಲ ಪಂದ್ಯ ಯಾವಾಗ?
ಈ ಬಾರಿಯ ಮಹಿಳಾ ಐಪಿಎಲ್‌ನಲ್ಲಿ ಆರ್​ಸಿಬಿ ತಂಡ ತಮ್ಮ ಮೊದಲ ಪಂದ್ಯವನ್ನು ದೆಹಲಿ ವಿರುದ್ಧ ಮಾರ್ಚ್ 5 ರಂದು ಆಡಲಿದೆ. ಈಗ ಬೆನ್ ಸಾಯರ್ ಅವರ ಮೇಲ್ವಿಚಾರಣೆಯಲ್ಲಿ ಆರ್‌ಸಿಬಿ ಎಷ್ಟು ಚೆನ್ನಾಗಿ ಆಡುತ್ತದೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ

error: Content is protected !!