ಬೆಳಗಾವಿ: ಸಾಕಷ್ಟು ಕುತೂಹಲ ಮೂಡಿಸಿದ್ದ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಗೊಂದಲ ತೆರೆಕಂಡಿದ್ದು, ರತ್ನಾ ಮಾಮನಿ ಅವರಿಗೆ ಬಿಗ್ ರಿಲಿಫ್ ಸಿಕ್ಕಿದೆ. ರತ್ನಾ ಮಾಮನಿಯವರು ಸಲ್ಲಿಸಿದ ಅಫಿಡವಿಟ್ಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇಂದು ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ್ದು, ಪರ, ವಿರುದ್ಧದ ವಕೀಲರ ವಾದ ಆಲಿಸಿ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಸ್ವೀಕರಿಸಿದ್ದಾರೆ.
ರತ್ನಾ ಮಾಮನಿ ಅಫಿಡವಿಟ್ ಆಕ್ಷೇಪಣೆಗೆ ಕಾರಣ
ರತ್ನಾ ಮಾಮನಿ ಅವರು ಅಫಿಡೆವಿಟ್ ಸಲ್ಲಿಕೆ ವೇಳೆ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಸಿದ್ದಾರೆಂದು ಸವದತ್ತಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಾಪುಗೌಡ ಪಾಟೀಲ್ ನಿನ್ನೆ ನಾಮಪತ್ರ ಪರಿಶೀಲನೆ ವೇಳೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು.
ರತ್ನಾ ಮಾಮನಿ ಅವರು ಏ.18 ಹಾಗೂ ಏ.19ರಂದು ಎರಡು ಬಾರಿ ನಾಮಪತ್ರ ಸಲ್ಲಿಸಿದ್ದರು. ಎರಡೂ ಬಾರಿಯೂ ಪ್ರಜಾಪ್ರತಿನಿಧಿ ಕಾಯ್ದೆ 2019ರ ತಿದ್ದುಪಡಿ ಪ್ರಕಾರ ಪರಿಷ್ಕೃತ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸದೆ, 2018ರ ಮಾದರಿಯ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ವಿಪಕ್ಷಗಳು ಆಗ್ರಹಿಸಿದ್ದವು.
ಅಲ್ಲದೇ ಚುನಾವಣಾಧಿಕಾರಿಗಳ ನೋಟಿಸ್ ಬಳಿಕವೂ ರತ್ನಾ ಮಾಮನಿ ಅವರು ಎರಡೂ ಬಾರಿ ಹಳೆಯ ಮಾದರಿ ಫಾರ್ಮ್ ಸಂಖ್ಯೆ 26 ಸಲ್ಲಿಕೆ ಮಾಡಿದ್ದಾರೆಂದು ಆರೋಪವಿತ್ತು. ನೋಟಿಸ್ ನೀಡಿದ ನಂತರ ನಾಮಪತ್ರ ಪರಿಶೀಲನೆ ಅವಧಿ ಮುಕ್ತಾಯವಾದ ಬಳಿಕ ಅಫಿಡೆವಿಟ್ ಸಲ್ಲಿಕೆ ಮಾಡಿದ್ದಾರೆ. ಇದೂ ಸಹ ಕಾನೂನು ಬಾಹಿರ ಎಂದು ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳು ಆರೋಪ ಆರೋಪ ಮಾಡಿದ್ದವು.
ಈ ಹಿನ್ನೆಲೆ ಇಂದು ಬೆಳಿಗ್ಗೆ 10ಕ್ಕೆ ಆಕ್ಷೇಪಣೆಗಳ ವಿಚಾರಣೆಗೆ ಲಿಖಿತ ಹೇಳಿಕೆಯೊಂದಿಗೆ ಹಾಜರಾಗುವಂತೆ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರಿಗೆ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಚುನಾವಣಾಧಿಕಾರಿ ಡಾ.ರಾಜೀವ್ ಕೂಲೇರ್ ನೋಟಿಸ್ ನೀಡಿದ್ದರು. ರತ್ನಾ ಮಾಮನಿ ಅವರು ವಿಚಾರಣೆಗೆ ಹಾಜಾರಾಗಿದ್ದು, ಚುನಾವಾಣಾ ಅಧಿಕಾರಿಗಳು ನಾಮಪತ್ರ ಕ್ರಮಬದ್ಧವಾಗಿದೆ ಎಂದು ಸ್ವೀಕರಿಸಿದ್ದಾರೆ.
ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರವಾದ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಪರ ವಕೀಲ ಮುರುಘೇಂದ್ರ ವಂಟಮೂರಿ ಸಜ್ಜಾಗಿದ್ದಾರೆ. ನಾವು ಹೈಕೋರ್ಟ್ನಲ್ಲಿ ಫೈಟ್ ಮಾಡುತ್ತೇವೆ. ಯಾವ ಕಾರಣಕ್ಕೆ ಅಂಗೀಕಾರ ಆಗಿದೆ ಮಾಡಿದ್ದಾರೆ ಎಂದು ನಮಗೆ ತಿಳಿಸಿಲ್ಲ. ಕೇವಲ ಅಂಗೀಕಾರ ಆಗಿದೆ ಅಂತ ಮಾತ್ರ ಹೇಳಿದ್ದಾರೆ. ನಾವು ಚುನಾವಣಾಧಿಕಾರಿಗಳ ಬಳಿ ತೀರ್ಪಿನ ಪ್ರತಿ ಪಡೆದು ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.