ಕೂಗು ನಿಮ್ಮದು ಧ್ವನಿ ನಮ್ಮದು

ಮೋಹಕ ತಾರೆ ರಮ್ಯಾ ಮಾಡಿದ ಸಹಾಯ ಸ್ಮರಿಸಿದ ನಾಗಶೇಖರ್, ಹಂಚಿಕೊಂಡರು ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಅಪರೂಪದ ವಿಷಯ

ವಿಕೆಂಡ್ ವಿತ್ ರಮೇಶ್ ಸೀಸನ್ 5 ರ ಮೊದಲ ಎಪಿಸೋಡ್ಗೆ ರಮ್ಯಾ ಅತಿಥಿಯಾಗಿ ಆಗಮಿಸಿ ಸಾಧಕರ ಕುರ್ಚಿ ಅಲಂಕರಿಸಿದ್ದಾರೆ. ಮೊದಲ ಎಪಿಸೋಡ್ನಲ್ಲಿ ರಮ್ಯಾರ ಬಾಲ್ಯ, ಶಾಲೆ, ಗೆಳೆಯರ ಬಗ್ಗೆ ಹಲವು ವಿಷಯಗಳನ್ನು ಶೋ ತೆರೆದಿಟ್ಟಿದೆ. ಇದರ ಜೊತೆಗೆ ರಮ್ಯಾರ ಸಿನಿ ಜರ್ನಿಯ ಬಗ್ಗೆಯೂ ಶೋನಲ್ಲಿ ಬೆಳಕು ಚೆಲ್ಲಲಾಗಿದ್ದು, ರಮ್ಯಾರ ವೃತ್ತಿ ಬದುಕಿನ ಸೂಪರ್ ಹಿಟ್ ಸಿನಿಮಾ ಸಂಜು ವೆಡ್ಸ್ ಗೀತಾ ಬಗೆಗಿನ ಕೆಲವು ಅಪರೂಪದ ಮಾಹಿತಿಗಳು ಮೊದಲ ಎಪಿಸೋಡ್ನಲ್ಲಿ ಬಹಿರಂಗಗೊಂಡಿವೆ.

ಶೋನಲ್ಲಿ ರಮ್ಯಾರ ಮೊದಲ ಸಿನಿಮಾ ಅಭಿ, ಎರಡನೇ ಹಿಟ್ ಸಿನಿಮಾ ಎಕ್ಸ್ಕ್ಯೂಸ್ಮಿ ಬಳಿಕ ಮಾತು ಸಂಜು ವೆಡ್ಸ್ ಗೀತಾ ಸಿನಿಮಾದ ಕಡೆಗೆ ಹೊರಳಿತು. ಮೊದಲಿಗೆ ಸಂಜು ವೆಡ್ಸ್ ಗೀತಾ ಸಿನಿಮಾದ ನಿರ್ದೇಶಕ ನಾಗಶೇಖರ್ ಅವರ ವಿಡಿಯೋ ಪ್ರಸಾರ ಮಾಡಲಾಯಿತು. ಅದು ಮುಗಿದಂತೆಯೇ ನಾಗಶೇಖರ್ ಹಾಗೂ ಸಂಜು ವೆಡ್ಸ್ ಗೀತಾ ಸಿನಿಮಾದ ನಾಯಕ ಶ್ರೀನಗರ ಕಿಟ್ಟಿ ವೀಕೆಂಡ್ ವೇದಿಕೆಗೆ ಆಗಮಿಸಿ ರಮ್ಯಾಗೆ ಶಾಕ್ ನೀಡಿದರು.

ಆಗ ಮಾತನಾಡಿದ ನಾಗಶೇಖರ್, ”ಹಣ ಖಾಲಿಯಾಗಿ ಸಂಜು ವೆಡ್ಸ್ ಗೀತಾ ಸಿನಿಮಾ ನಿಂತು ಹೋಗಿತ್ತು. ಆಗ ರಮ್ಯಾ ತಮ್ಮ ಹಣ ಹಾಕಿ ಸಿನಿಮಾದ ಚಿತ್ರೀಕರಣ ಮುಗಿಯುವಂತೆ ಮಾಡಿದರು. ಆ ಸಿನಿಮಾ ಸೂಪರ್ ಹಿಟ್ ಆಗಿ ನನಗೆ ಒಂದು ನೆಲೆ ಕೊಟ್ಟಿತು. ನನ್ನ ಮನೆಯಲ್ಲಿ ನಾನು ದೇವರ ಜೊತೆಗೆ ವಸ್ತುವೊಂದನ್ನಿಟ್ಟು ಪೂಜಿಸುತ್ತೇನೆ ಅದನ್ನು ರಮ್ಯಾಗೆ ಉಡುಗೊರೆಯಾಗಿ ತಂದಿದ್ದೇನೆ ಎಂದು ರಮ್ಯಾಗೆ ಉಡುಗೊರೆ ಕೊಟ್ಟರು. ಉಡುಗೊರೆಯನ್ನು ಬಿಚ್ಚಿ ನೋಡಿದ ರಮ್ಯಾಗೆ ಶಾಕ್. ಅದು ಸಂಜು ವೆಡ್ಸ್ ಗೀತಾ ಸಿನಿಮಾದ ಕ್ಲಾಪ್ ಆಗಿತ್ತು. ಅದನ್ನು ತಾನೇ ಇಟ್ಟುಕೊಳ್ಳುವುದಾಗಿ ರಮ್ಯಾ ಹೇಳಿದರು.

ಊಟಿಯಲ್ಲಿ ಮಳೆಯಲ್ಲಿ ಶೂಟಿಂಗ್ ಮಾಡಿದ್ದು, ಯಾರ ಬಳಿಯೂ ಜಾಕೆಟ್, ಬೂಟ್ ಇಲ್ಲದ್ದನ್ನು ಕಂಡು ರಮ್ಯಾ ಹೋಗಿ ಎಲ್ಲರಿಗೂ ಜಾಕೆಟ್, ಬೂಟ್ಗಳನ್ನು ತಂದಿದ್ದನ್ನು ಸಹ ಇದೇ ಸಮಯದಲ್ಲಿ ನೆನಪಿಸಿಕೊಂಡರು. ಅಲ್ಲದೆ, ಸಂಜು ವೆಡ್ಸ್ ಸಿನಿಮಾದ ಕತೆಯನ್ನು ರಮ್ಯಾರ ತಂದೆ ಮೊದಲು ಕೇಳಿ ಶುಭ ಹಾರೈಸಿದ್ದಲ್ಲದೆ, ಸಿನಿಮಾವನ್ನು ಮೊದಲು ನೋಡಿದ್ದು ಸಹ ಅವರೇ ಎಂಬುದನ್ನು ನಾಗಶೇಖರ್ ಹೇಳಿದರು. ನಟ ಕಿಟ್ಟಿ ಸಹ ರಮ್ಯಾರ ಸ್ನೇಹವನ್ನು ನೆನಪಿಸಿಕೊಂಡರು. ರಮ್ಯಾ ಹಾಗೂ ಕಿಟ್ಟಿ ಸೇರಿ ಸಂಜು ವೆಡ್ಸ್ ಗೀತಾ ಸಿನಿಮಾದ ದೃಶ್ಯವೊಂದನ್ನು ವೇದಿಕೆ ಮೇಲೆ ನಟಿಸಿದರು.

ನಟಿ ರಮ್ಯಾ ಸಹ ಸಂಜು ವೆಡ್ಸ್ ಗೀತಾ ಸಿನಿಮಾ ಚಿತ್ರೀಕರಣದ ನೆನಪುಗಳಿಗೆ ಜಾರಿದರು. ಶರಣ್ ನಗಿಸುತ್ತಿದ್ದ ರೀತಿ, ಅರುಣ್ ಸಾಗರ್ ಎಲ್ಲವನ್ನೂ ನೆನಪು ಮಾಡಿಕೊಂಡರು. ಅದೊಂದು ಬಹಳ ಫನ್ ಆದ ಚಿತ್ರೀಕರಣವಾಗಿತ್ತು ಎಂದರು ನಟಿ ರಮ್ಯಾ.

error: Content is protected !!