ಮಂಡ್ಯ: ಜಿಲ್ಲಾ ರಾಜಕಾರಣದಲ್ಲಿ ಮಿಂಚಿನಂತೆ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿ ಅಷ್ಟೇ ವೇಗದಲ್ಲಿ ಮರೆಯಾದ ಮಾಜಿ ಸಂಸದೆ ರಮ್ಯಾ ಇದೀಗ ಬಿಜೆಪಿ ಸೇರಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷದೊಳಗೆ ಕಡೆಗಣನೆಗೆ ಒಳಗಾದಂತೆ ಕಂಡುಬಂದಿರುವ ಅವರು ಕಮಲ ಪಾಳಯದೊಳಗೆ ನೆಲೆ ಕಂಡುಕೊಳ್ಳುವ ಪ್ರಯತ್ನಕ್ಕಿಳಿದಿದ್ದಾರೆ ಎನ್ನಲಾಗಿದೆ.
ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುವುದಕ್ಕೆ ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ. ಪಕ್ಷ ಸೇರ್ಪಡೆ ಕುರಿತು ಸ್ಪಷ್ಟತೀರ್ಮಾನ ಕೈಗೊಳ್ಳಲಾಗದೆ ಗೊಂದಲದಲ್ಲಿದ್ದಾರೆ. ಸುಮಲತಾ ಸೇರ್ಪಡೆ ವಿಚಾರ ಇನ್ನೂ ರಾಷ್ಟ್ರ ನಾಯಕರ ಹಂತದಲ್ಲಿದೆ. ಆ ಮಾತುಕತೆ ಮುರಿದುಬಿದ್ದರೆ ರಮ್ಯಾ ಬಿಜೆಪಿ ಸೇರುವುದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ. ರಮ್ಯಾ ಬಿಜೆಪಿ ಸೇರುವ ವಿಚಾರವಿನ್ನೂ ಪ್ರಾಥಮಿಕ ಹಂತದಲ್ಲಿದೆ. ಇನ್ನೂ ಈ ಬಗ್ಗೆ ಎರಡು ಮೂರು ಸುತ್ತಿನ ಮಾತುಕತೆಗಳು ನಡೆಯಬೇಕಿದೆ. ಅಲ್ಲಿಯವರೆಗೂ ಸ್ಪಷ್ಟಚಿತ್ರಣ ಸಿಗುವುದು ಕಷ್ಟ.
ರಮ್ಯಾ ವರ್ಚಸ್ಸು: ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲವರ್ಧನೆಗೊಳಿಸುವ ಉತ್ಸಾಹದಲ್ಲಿರುವ ಬಿಜೆಪಿ ನಾಯಕರು ರಮ್ಯಾ ಅವರನ್ನು ಒಂದು ಆಯ್ಕೆಯಾಗಿ ಇಟ್ಟುಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಾಜಿ ಸಂಸದೆಯಾಗಿರುವ ರಮ್ಯಾ ವರ್ಚಸ್ವಿ ನಾಯಕಿಯಾಗಿದ್ದಾರೆ. ಆರು ತಿಂಗಳ ಅಲ್ಪಾವಧಿಯಲ್ಲಿ ಜಿಲ್ಲೆಯೊಳಗೆ ಗಮನಸೆಳೆಯುವಂತಹ ಕಾರ್ಯಗಳನ್ನು ಮಾಡುವುದರೊಂದಿಗೆ ಜನಪ್ರಿಯತೆ ಗಳಿಸಿಕೊಂಡಿದ್ದರು. ಆದರೆ, 2015ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ರಮ್ಯಾ ಸೋಲಿಗೆ ಕಾರಣವಾಗಿ ಜಿಲ್ಲೆಯಿಂದ ನಿರ್ಗಮಿಸುವಂತೆ ಮಾಡಿತು
ಸುಮಲತಾ ಇಮೇಜ್ ಕ್ಷೀಣ: ಜಿಲ್ಲೆಯೊಳಗೆ ಸಂಸದೆ ಸುಮಲತಾ ಇಮೇಜ್ ಕೂಡ ಕಡಿಮೆಯಾಗಿದೆ. 2019ರ ಲೋಕಸಭಾ ಚುನಾವಣಾ ಸಂದರ್ಭದ ಪರಿಸ್ಥಿತಿ, ವಾತಾವರಣ ಈಗಿಲ್ಲ. ಮುಂದಿನ ಚುನಾವಣೆಯಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದು ಕನಸಿನ ಮಾತು. ಅದಕ್ಕಾಗಿ ಅವರು ಬಿಜೆಪಿ ಅಥವಾ ಕಾಂಗ್ರೆಸ್ ಸೇರುವುದು ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ಅನಿವಾರ್ಯವಾಗಿದೆ.
ಸುಮಲತಾ ಅವರು ಸಂಸದೆಯಾದ ಬಳಿಕ ಸಂಸತ್‌ನಲ್ಲಿ ಜಿಲ್ಲೆಯ ಪರವಾಗಿ ದಿಟ್ಟವಾಗಿ ಧ್ವನಿ ಎತ್ತಿ ಮಾತನಾಡಿರುವುದನ್ನು ಹೊರತುಪಡಿಸಿದರೆ ಗಮನಸೆಳೆಯುವಂತಹ ಸಾಧನೆಗಳನ್ನಾಗಲೀ, ಕೊಡುಗೆಗಳನ್ನಾಗಲೀ ನೀಡಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ರಮ್ಯಾ ಕೇವಲ ಆರು ತಿಂಗಳು ಸಂಸದೆಯಾಗಿದ್ದರೂ ಮೈಷುಗರ್ ಕಾರ್ಖಾನೆಯನ್ನು ರೋಗಗ್ರಸ್ಥ ಕಾರ್ಖಾನೆ ಎಂಬ ಹಣೆಪಟ್ಟಿಯಿಂದ ಹೊರತರಲು ಬಿಐಎಫ್‌ಆರ್ ಸಂಸ್ಥೆಯ ಅಧಿಕಾರಿಗಳನ್ನು ಕರೆತಂದು ಕಾಯಕಲ್ಪಕ್ಕೆ ಪ್ರಯತ್ನಿಸಿದ್ದರು. ಕೇಂದ್ರೀಯ ವಿದ್ಯಾಲಯವನ್ನು ತಂದರು, ಮಿಮ್ಸ್ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಗೆ 45 ಕೋಟಿ ರು. ಹಣ ಮಂಜೂರು ಮಾಡಿಸಿಕೊಟ್ಟರು. ಶಾಲಾ ಮಕ್ಕಳಿಗೆ ಶೂ ವಿತರಣೆ, ಇಂತಹ ಕೆಲವು ಗಮನಸೆಳೆಯುವಂತಹ ಕೆಲಸಗಳನ್ನು ಮಾಡಿದ್ದರು.
ಸುಮಲತಾ ಷರತ್ತುಗಳು ಅಡ್ಡಿಯೇ?
ಸುಮಲತಾ ಬಿಜೆಪಿ ಸೇರುವುದಕ್ಕೆ ಅವರು ಹಾಕಿರುವ ಷರತ್ತುಗಳು ಅಡ್ಡಿಯಾಗಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಷರತ್ತುಗಳನ್ನು ರಾಷ್ಟ್ರ ಮತ್ತು ರಾಜ್ಯ ನಾಯಕರು ಒಪ್ಪದಿರುವುದಕ್ಕೆ ಕ್ಷೇತ್ರದೊಳಗೆ ಸುಮಲತಾ ಇಮೇಜ್ ಕುಸಿದಿರುವುದೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಮಾತುಗಾರಿಕೆಯಲ್ಲಿ ಜಾಣತನವಿರುವುದನ್ನು ಹೊರತುಪಡಿಸಿದರೆ ಅಂಬರೀಶ್ ಬಳಿಕ ಅವರು ಹೊಂದಿದ್ದ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಹಾಗೂ ವರ್ಚಸ್ವಿ ನಾಯಕಿಯಾಗಿ ಬೆಳವಣಿಗೆ ಸಾಧಿಸದಿರುವುದು ಸುಮಲತಾ ರಾಜಕೀಯ ದೌರ್ಬಲ್ಯವಾಗಿದೆ. ಹಾಗಾಗಿ ಬಿಜೆಪಿ ನಾಯಕರು ಪಕ್ಷ ಸೇರ್ಪಡೆ ವಿಚಾರದಲ್ಲಿ ಸುಮಲತಾ ಅವರನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲವೆಂದು ಹೇಳಲಾಗುತ್ತಿದೆ.
ರಮ್ಯಾ-ಸುಮಾ ಒಂದೇ ಪಕ್ಷದಲ್ಲಿರುವುದು ಅನುಮಾನ: ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಂಸದೆ ರಮ್ಯಾ ಒಂದೇ ಪಕ್ಷದಲ್ಲಿ ಇರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಸುಮಲತಾ ಬಿಜೆಪಿ ಸೇರಿದರೆ ರಮ್ಯಾ ಕಾಂಗ್ರೆಸ್‌ನಲ್ಲಿ ಉಳಿಯಬಹುದು. ಒಮ್ಮೆ ಸುಮಲತಾ ಕಾಂಗ್ರೆಸ್ ಸೇರಿದರೆ ರಮ್ಯಾ ಬಿಜೆಪಿ ಸೇರುವ ಸಾಧ್ಯತೆಗಳಿವೆ. ಆದರೆ, ಇಬ್ಬರೂ ಒಂದೇ ಪಕ್ಷದಲ್ಲಿ ಇರುವುದಿಲ್ಲ ಎಂದು ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ರಮ್ಯಾ ಅವರನ್ನು ಕೆಲವು ಬಿಜೆಪಿ ನಾಯಕರು ಸಂಪರ್ಕಿಸಿದ ವೇಳೆ ಪಕ್ಷ ಸೇರುವುದಕ್ಕೆ ಉತ್ಸಾಹ ತೋರಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಡಿಸೆಂಬರೆಗೂ ಕಾದುನೋಡುವಂತೆ ತಿಳಿಸಿದ್ದಾರೆನ್ನಲಾಗಿದ್ದು, ಹಳೇ ಮೈಸೂರು ಭಾಗದ ಬಗ್ಗೆ ವಿಶೇಷ ಗಮನಹರಿಸಿರುವ ಬಿಜೆಪಿಯವರು ಹೇಗೆ ರಾಜಕೀಯ ದಾಳಗಳನ್ನು ಉರುಳಿಸಲಿದ್ದಾರೆ ಎನ್ನುವುದನ್ನು ಮುಂದೆ ಕಾದುನೋಡಬೇಕಿದೆ.
ಕಾಂಗ್ರೆಸ್‌ನೊಳಗೆ ರಮ್ಯಾ ಮೂಲೆಗುಂಪು!
ಪ್ರಸ್ತುತ ಕಾಂಗ್ರೆಸ್‌ನೊಳಗೆ ಮಾಜಿ ಸಂಸದೆ ರಮ್ಯಾ ಮೂಲೆಗುಂಪಾಗಿದ್ದಾರೆ. ಅವರಿಗೆ ಪಕ್ಷದೊಳಗೆ ಯಾವುದೇ ಸ್ಥಾನ-ಮಾನವೂ ಸಿಕ್ಕಿಲ್ಲ. ರಾಜಕೀಯ ಅವಕಾಶಗಳೂ ದೊರಕುತ್ತಿಲ್ಲ. ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್ ಬಗ್ಗೆ ರಮ್ಯಾ ಬೇಸರಗೊಂಡಿದ್ದಾರೆ. ಆಗಾಗ ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಿಸಿಕೊಳ್ಳುವ ರಮ್ಯಾ ಮತ್ತೆ ಮರೆಯಾಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜಕೀಯ ಚಟುವಟಿಕೆಗಳಿಂದ ದೂರವಿರುವಂತೆ ಕಂಡುಬರುತ್ತಿದ್ದಾರೆ. ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರಿಂದ ಕಡೆಗಣಿಸಲ್ಪಟ್ಟಿರುವ ರಮ್ಯಾ ಕೈ ಪಾಳಯದೊಳಗೆ ರಾಜಕೀಯ ಬೆಳವಣಿಗೆ ಸಾಧ್ಯವಿಲ್ಲ ಎಂದು ಅರಿತು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಸಂಸದೆ ಸುಮಲತಾ ನಿಲುವು ಅಸ್ಪಷ್ಟವಾಗಿರುವುದರಿಂದ ರಮ್ಯಾ ಎಂಟ್ರಿಗೆ ಬ್ರೇಕ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.