ಕೂಗು ನಿಮ್ಮದು ಧ್ವನಿ ನಮ್ಮದು

ರಮೇಶ ಜಾರಕಿಹೊಳಿ ಜೆಡಿಎಸ್‌ಗೆ ಬಂದರೆ ಸ್ವಾಗತ’

ಬೆಳಗಾವಿ: ಬೆಳಗಾವಿ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧೆ, ರಾಜ್ಯಾದ್ಯಂತ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. ರಾಜ್ಯದಲ್ಲಿ ಜೆಡಿಎಸ್‌ 123 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಸ್ವಂತ ಬಲದಿಂದ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮಲ್ಲಿ ಒಂದೊಂದು ಸೀಟ್‌ಗೆ ಎರಡು ಮೂರು ಜನರ ಸ್ಪರ್ಧೆ ಇದೆ. ಬೆಳಗಾವಿಯಿಂದ ನಮ್ಮ ಪಕ್ಷಕ್ಕೆ ಕೆಲವರು ಬರುತ್ತಿದ್ದಾರೆ. ರಮೇಶ ಜಾರಕಿಹೊಳಿ ಬರುವ ಕುರಿತು ಇನ್ನೂ ಚರ್ಚೆ ಆಗಿಲ್ಲ. ಅದನ್ನು ಕುಮಾರಸ್ವಾಮಿ ಅವರನ್ನೇ ಕೇಳಬೇಕು. ಮಾಜಿ ಸಚಿವ ರಮೇಶ ಜಾರಕಿಹೊಳಿ ಜೆಡಿಎಸ್‌ ಪಕ್ಷಕ್ಕೆ ಬಂದರೆ ಸ್ವಾಗತ. ಸ್ಥಳೀಯರು ಒಪ್ಪಿಕೊಂಡರೆ ಯಾರೇ ಕೂಡ ಜೆಡಿಎಸ್‌ಗೆ ಬಂದರೂ ಸ್ವಾಗತ. ನಾವು ಸಾಹುಕಾರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ ಎಂದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್‌ ಒಬ್ಬರನ್ನೊಬ್ಬರು ಬೈಯ್ದಾಡುತ್ತಿದ್ದಾರೆ. ಒಬ್ಬರು ನಲವತ್ತು ಪರ್ಸೆಂಟ್‌, ಇನೊಬ್ಬರು ಇಪ್ಪತ್ತು ಪರ್ಸೆಂಟ್‌. ರಾಹುಲ… ಗಾಂಧಿ ಬಂದರು ನಡೆದುಕೊಂಡು ಹೋದರು. ಆದರೆ, ಏನು ಸಂದೇಶ ಕೊಟ್ಟರು. ನಾವು ಕಾಂಗ್ರೆಸ್‌ ಅನ್ನೂ ಬೈಯ್ಯುತ್ತಿಲ್ಲ, ಬಿಜೆಪಿಯನ್ನು ಬೈಯ್ಯುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನೋ ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ. ಬಿಜೆಪಿಯವರು ಸಿಬಿಐ, ಇಡಿ ಅವರನ್ನು ದುರ್ಬಳಕೆ ಮಾಡಿಕೊಂಡು ಇತರರನ್ನು ಹೆದರಿಸುತ್ತಿದ್ದಾರೆ ಎಂದರು.

ಸರ್ವಜನಾಂಗದ ಶಾಂತಿಯ ತೋಟ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ನಾವು ಕರ್ನಾಟಕದ ಸಾರ್ವಭೌಮತ್ವ ಉಳಿಸಿಕೊಳ್ಳುತ್ತೇವೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧ ಸದ್ಬಳಕೆಯಾಗಬೇಕು. ಈ ಭಾಗದ ಜನರು ಸಮಸ್ಯೆ ತೆಗೆದುಕೊಂಡು ಬೆಂಗಳೂರು ಬರುವುದು ಬೇಡ. ಅದು ಇಲ್ಲಿಯೇ ಇತ್ಯರ್ಥವಾಗಬೇಕು. ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರಕ್ಕೆ ಬಂದರೆ ಬೆಳಗಾವಿ ಸುವರ್ಣ ವಿಧಾನಸೌಧ ಸದ್ಬಳಕೆಗೆ ಆದ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಜೆಡಿಎಸ್‌ ಮುಖಂಡರಾದ ಫೈಜುಲ್ಲಾ ಮಾಡಿವಾಲೆ, ಭೀಮಪ್ಪ ಗಡಾದ, ಇನ್ನಿತರರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಅವರನ್ನು ನೋಡಿದರೆ ಇನ್ನು ಅಯ್ಯೋ ಅನಿಸುತ್ತದೆ. ಈಗಲೂ ಅವರ ಮೇಲೆ ನನಗೆ ಪ್ರೀತಿ ಇದೆ. ತಬ್ಬಲಿಯು ನೀನಾದ ಮಗನೇ ಅನ್ನೋ ಹಾಗೆ ಅವರು ತಬ್ಬಲಿ ಆಗಿದ್ದಾರೆ. ಅವರು ವರುಣಾ ಕ್ಷೇತ್ರದಲ್ಲಿ ನಿಂತೂ ಅಲ್ಲೇ ಗೆಲ್ಲಲಿ ಎಂದು ಹಾರೈಸುತ್ತೇನೆ.

-ಸಿ.ಎಂ.ಇಬ್ರಾಹಿಂ, ರಾಜ್ಯಾಧ್ಯಕ್ಷ, ಜೆಡಿಎಸ್‌

error: Content is protected !!