ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಅಧಿಕಾರ ಹಿಡಿಯಲು ಈ ಬಾರಿ ಕಾಂಗ್ರೆಸ್ ಹಲವು ಭರವಸೆ ನೀಡಿದೆ. ನವೆಂಬಂರ್ 12 ರಂದು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಇದೀಗ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. 1 ಲಕ್ಷ ಉದ್ಯೋಗ, ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂಪಾಯಿ ಮಾಸಾಶನ, 30 ಯುನಿಟ್ ಉಚಿತ ವಿದ್ಯುತ್, 10 ಕೋಟಿ ರೂಪಾಯಿ ಸ್ಟಾರ್ಟ್ ಅಪ್ ಫಂಡ್ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ಶಿಮ್ಲಾದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ಚತ್ತೀಸಘಡ ಮುಖ್ಯಮಂತ್ರಿ ಭೂಫೇಶ್ ಬಾಘೆಲ್, ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುಕ್ವಿಂದರ್ ಸಿಂಗ್ ಸುಕ್ಕು ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಹಿಮಾಚಲ ಪ್ರದೇಶಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಬೇಟಿ ನೀಡುತ್ತಿದ್ದಾರೆ. ಸೋಲನ್ ಹಾಗೂ ಸುಂದರ್ ನಗರದಲ್ಲಿ ಅತೀ ದೊಡ್ಡ ರ್ಯಾಲಿ ಆಯೋಜಿಸಲಾಗಿದೆ. ಇದಕ್ಕೂ ಮೊದಲೇ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿ ಭಾರಿ ಸಂಚನಲ ಸೃಷ್ಟಿಸಿಲು ಯತ್ನಿಸಿದೆ. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರಿಗೆ ಎನೆಲ್ಲಾ ನೀಡಲಿದ್ದೇವೆ ಅನ್ನೋ ದೊಡ್ಡ ಪಟ್ಟಿಯನ್ನೇ ನೀಡಿದೆ. ಇದರಲ್ಲಿ ಹಲವು ಉಚಿತ ಘೋಷಣೆಗಳು ಒಳಗೊಂಡಿದೆ. ಹಳೇ ಪಿಂಚಣಿ ಯೋಜನೆಯನ್ನು ಮತ್ತೆ ತರುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ.