ಹೊಸದಿಲ್ಲಿ: ಬಾರಿ ಮಳೆಗಾಲ ವಾಡಿಕೆಗಿಂತ ಸ್ವಲ್ಪ ತಡವಾಗಿ ಶುರುವಾಗಲಿದೆ. ಜೂನ್ ಮೊದಲ ವಾರ ಮಾನ್ಸೂನ್ ಕೇರಳಕ್ಕೆ ಪ್ರವೇಶವಾಗುತ್ತಿತ್ತು. ಆದರೆ ಈ ಬಾರಿ ತಡವಾಗಿಯೇ ದೇಶವನ್ನು ಪ್ರವೇಶ ಮಾಡಿದ್ದು, ಮುಂಗಾರು ಮಾರುತಗಳು ದುರ್ಬಲವಾಗಿರಲಿದೆ. ಜುಲೈ 6 ರವರೆಗೆ ಇದೇ ಹವಾಮಾನ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಸ್ಕೈಮೇಟ್ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಗಳು ಹೇಳಿವೆ.
ಇದು ಬಿತ್ತನೆ ಸಮಯವಾದ್ದರಿಂದ ರೈತರಿಗೆ ಸಂಕಷ್ಟ ಎದುರಾಗುತ್ತದೆ. ಭೂಮಿ ಒಣಗಿ ಬಿರುಕು ಬಿಡುತ್ತಿದೆ. ಜೂನ್ 01 ರಿಂದ ಭಾರತ ಶೇ. 80 ರಷ್ಟು ಮಳೆಯ ಕೊರತೆ ಅನುಭವಿಸುತ್ತಿದೆ ಎಂದು ಹವಾಮಾನ ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಜೂನ್ 1 ರ ವೇಳೆಗೆ ಕೇರಳಕ್ಕೆ ಪ್ರವೇಶಿಸುತ್ತಿತ್ತು. ಈ ಬಾರಿ ಜೂನ್ 04 ರಂದು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಹವಾಮಾನ ಬದಲಾವಣೆಯಿಂದ ಜೂನ್ 9 ರ ವೇಳೆಗೆ ಮಾನ್ಸೂನ್ ಮಾರುಗಳು ಆಗಮಿಸಿವೆ. ಬಿಪರ್‌ಜಾಯ್ ಚಂಡಮಾರುತದ ಕಾರಣ ಮುಂಗಾರು ತಡವಾಗಿ ಕೇರಳ ಪ್ರವೇಶಿಸಿದ್ದು, ಮುಂದಿನ ಒಂದು ವಾರ ಮುಂಗಾರು ದುರ್ಬಲವಾಗಿರುವುದಕ್ಕೆ ಚಂಡಮಾರುತವೇ ಕಾರಣ ಎಂದು ಹೇಳಲಾಗಿದೆ. ಚಂಡಮಾರುತವೂ ಮುಂಗಾರು ಬಲವಾಗುವುದನ್ನು ತಡೆಯುತ್ತದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಮೇ 29ರಂದೇ ಪ್ರವೇಶ!
ಕಳೆದ ವರ್ಷ ನೈರುತ್ಯ ಮುಂಗಾರು ಮೇ 29 ರಂದು ಕೇರಳ ಪ್ರವೇಶಿಸಿದ್ದರೆ, 2021ರಲ್ಲಿ ಜೂನ್ 3 ರಂದು, 2020ರಲ್ಲಿ ಜೂನ್ 1 ರಂದು, 2019ರಲ್ಲಿ ಜೂನ್ 8ರಂದು ಮತ್ತು 2018ರಲ್ಲಿ ಮೇ 29 ರಂದು ಕೇರಳವನ್ನು ಪ್ರವೇಶಿಸಿತ್ತು. ಕೇರಳವನ್ನು ಸ್ವಲ್ಪ ತಡವಾಗಿ ಮುಂಗಾರು ಪ್ರವೇಶಿಸಿದರೆ ದೇಶದ ಇತರ ಭಾಗಗಳಲ್ಲೂ ಮುಂಗಾರು ತಡವಾಗುತ್ತದೆ ಎಂದು ಅರ್ಥವಲ್ಲ ಎಂದು ವಿಜ್ಞಾನಿಗಳು ಹೇಳಿದ್ದು, ದೇಶದ ಒಟ್ಟು ಮಳೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.